Home ಜಿಲ್ಲೆ ನಿಸರ್ಗ ಕಾನ್ವೆಂಟ್ ಸ್ಕೂಲ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮ

ನಿಸರ್ಗ ಕಾನ್ವೆಂಟ್ ಸ್ಕೂಲ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮ

ಬೀದರ್: ಜೂ.೬:ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಓಡವಾಡ-ಸೋಲಾಪುರ ರಸ್ತೆ ಪ್ರದೇಶದಲ್ಲಿರುವ ನಿಸರ್ಗ ಕಾನ್ವೆಂಟ್ ಸ್ಕೂಲ್‌ನಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಸಸಿಯನ್ನು ವಿತರಿಸಿ, ಅದನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ವಹಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸ್ಪರ್ಧಾಗುರು ಬೀದರ್ ಐ ಎ ಎಸ್& ಕೆ ಎ ಎಸ್ ಸ್ಟಡಿ ಸೆಂಟರ್‌ನ ಸಂಸ್ಥಾಪಕ ಅಮಿತ್ ಸೋಲಪುರ ಅವರು ಮಾತನಾಡಿ, ಪರಿಸರವು ದೇವರು ಮಾನವನಿಗೆ ನೀಡಿರುವ ಅತ್ಯಮೂಲ್ಯವಾದ ನೈಸರ್ಗಿಕ ಸಂಪತ್ತಾಗಿದ್ದು, ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ಇಂದಿನ ಆಧುನಿಕ ಜೀವನಶೈಲಿಯಿಂದ ಪರಿಸರದ ಮೇಲೆ ದುಷ್ಪರಿಣಾಮಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಬೆಳೆಸುವ ಅಗತ್ಯವಿದೆ. ಪ್ಲಾಸ್ಟಿಕ್ ಮತ್ತು ವಿವಿಧ ಪ್ಯಾಕೆಟ್ ಆಹಾರ ಪದಾರ್ಥಗಳ ಅತಿಯಾದ ಬಳಕೆ, ಕೈಗಾರಿಕೆಗಳಿಂದ ಹೊರಬರುವ ಕಲುಷಿತ ನೀರನ್ನು ನದಿಗಳಿಗೆ ಹರಿಸುವುದು, ವಾಹನಗಳ ಹೊಗೆ, ಮನೆಗಳಲ್ಲಿ ಬಳಸುವ ಫ್ರೀಜ್ ಮತ್ತು ಏರ್ ಕಂಡೀಶನರ್‌ಗಳAತಹ ಸಾಧನಗಳಿಂದ ವಾಯುಮಾಲಿನ್ಯ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆಯು ಕೇವಲ ಒಂದು ದಿನದ ಆಚರಣೆಯಾಗದೆ, ಪರಿಸರ ಸಂರಕ್ಷಣೆಯ ಸಂಕಲ್ಪ ದಿನವಾಗಬೇಕು. ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಕನಿಷ್ಠ ಒಂದು ಸಸಿಯನ್ನು ನೆಟ್ಟು ಅದರ ಆರೈಕೆ ಮಾಡಬೇಕು. ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಮಳೆ ನೀರು ಸಂಗ್ರಹಣೆ, ತ್ಯಾಜ್ಯ ವಿಂಗಡಣೆ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಆದ್ಯತೆ ನೀಡುವ ಮೂಲಕ ಪರಿಸರ ರಕ್ಷಣೆಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಪರಿಸರ ಸಂರಕ್ಷಣೆ ಮೂಲಕವೇ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಮತ್ತು ಪ್ರಕೃತಿ ವಿಕೋಪಗಳಂತಹ ಸಮಸ್ಯೆಗಳನ್ನು ತಗ್ಗಿಸಲು ಸಾಧ್ಯ. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲಕರಾದ ಸಂಗಮೇಶ ಬಿರಾದಾರ, ಓಂಕಾರ ಜಟನೋರ, ಮುಖ್ಯಗುರುಗಳಾದ ಶ್ರುತಿ ಬರಗಲೆ, ಪ್ರಿಯಾಂಕಾ ಕಮಟನ್ಕರ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.