
ಅಫಜಲಪೂರ,ಜೂ.8-ತಾಲೂಕಿನ ಚೌಡಾಪೂರ ಗ್ರಾಮದ ಪ್ರಮುಖ ಹಾಗೂ ಒಳ ರಸ್ತೆಗಳು ತುಂತುರು ಮಳೆಗೆ ಸಂಪೂರ್ಣವಾಗಿ ಹಾಳಾಗಿ ಹದಗೆಟ್ಟು ಗುಂಡಿಮಾಯವಾಗಿವೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿ ರಮೇಶ ಎಂ ಜಮಾದಾರ ತಿಳಿಸಿದ್ದಾರೆ.
ರಸ್ತೆಗಳು ಹಾಳಾಗಿರುವುದರಿಂದ ಗ್ರಾಮಸ್ಥರ ದೈನಂದಿನ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಟ್ಟು ವಾಹನ ಸಂಚಾರಕ್ಕೂ, ಕಾಲ್ನಡಿಗೆಗೂ ತೀವ್ರ ತೊಂದರೆ ಉಂಟಾಗಿದೆ. ಬೇಸಿಗೆ ಸಮಯದಲ್ಲಿ ಧೂಳಿನಿಂದ ಕೂಡಿರುತ್ತದೆ. ಮಳೆ ಬಂದ ಸಮಯದಲ್ಲಿ “ರಸ್ತೆ ಇದೆಯೋ, ಗುಂಡಿ ಇದೆಯೋ? ಎಂಬ ಪ್ರಶ್ನೆ ಗ್ರಾಮಸ್ಥರಲ್ಲೇ ಮೂಡುವಂತಾಗಿದೆ. ಗ್ರಾಮ ಪಂಚಾಯತಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ತಿಳಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಕೇವಲ ಭರವಸೆ ನೀಡುವ ಕೆಲಸವಲ್ಲ, ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವ ಹೊಣೆಗಾರಿಕೆ ಅಧಿಕಾರಿಗಳದ್ದಾಗಿರಬೇಕು.ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ಮಾಡಿ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸದಿದ್ದರೆ ಗ್ರಾಮಸ್ಥರು ಸಂಘಟಿತವಾಗಿ ಹೋರಾಟ ನಡೆಸುವುದಾಗಿ ಹಾಗೂ ಪ್ರತಿಭಟನೆಗೆ ಇಳಿಯುವುದಾಗಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.






















