
ಬೀದರ:ಜೂ.9: ಸೇವಾ ನಿವೃತ್ತಿ ಎಂಬುದು ಜೀವನದ ಕೊನೆಯಲ್ಲ. ಬದಲಾಗಿ ಅದು ನಿಜವಾದ ಜೀವನದ ಆರಂಭದ ಕ್ಷಣಗಳಾಗಿವೆ ಎಂದು ಔರಾದ ತಾಲೂಕಾ ಮುಖಂಡರಾದ ಶಿವಾಜಿ ಪಾಟೀಲ ಮುಂಗನಾಳ ತಿಳಿಸಿದರು.
ನಗರದ ಮಯೂರಾ ಹೊಟೇಲ್ ಸಭಾಂಗಣದಲ್ಲಿ ಭಾನುವಾರ ಜರುಗಿದ ಅಪ್ಪಾರಾವ ಪಾಟೀಲ ಕಂದಗೂಳ ಅವರ ಸೇವಾ ನಿವೃತ್ತಿ ಪ್ರಯುಕ್ತ ಆಯೋಜಿಸಿದ ಸನ್ಮಾನ ಸಮಾರಂಭದಲ್ಲಿ ಪಾಟೀಲ ಅವರಿಗೆ ಸನ್ಮಾನಿಸಿ ಮಾತನಾಡಿದರು.
ಹಲವರು ಸೇವಾ ನಿವೃತ್ತಿ ಹೊಂದಿದ ತಕ್ಷಣ ನನ್ನ ಜೀವನ ಮುಗಿಯಿತು. ನಾನು ನಿವೃತ್ತನಾದೆ ಎಂದು ಚಿಂತೆ ಮಾಡುತ್ತಾರೆ. ಆದರೆ ಕರ್ತವ್ಯದಿಂದ ನಿವೃತ್ತಿ ಹೊಂದಿದ ತಕ್ಷಣ ಸಮಾಜ ಸೇವೆಗೆ ಅಣಿಯಾಗುವ ನಿಜವಾದ ಆರಂಭದ ದಿನಗಳೇ ಇದಾಗಿದೆ. ಹೀಗಾಗಿ ಕರಕ್ಯಾಳ ಗ್ರಾಮದಲ್ಲಿ ಸುಮಾರು ಮೂರು ದಶಕಗಳ ಕಾಲ ಶಿಕ್ಷಕರಾಗಿ, ಕೊನೆಗೆ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಪ್ಪಾರಾವ ಪಾಟೀಲ ಅವರಿಗೆ ದೇವರು ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಎಂದು ಶುಭ ಹಾರೈಸಿದರು.
ಅಪ್ಪರಾವ ಪಾಟೀಲ ಕಂದಗೂಳ ಅವರು ಶಾಲೆಯಲ್ಲಿ ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ದೇಶದ ಅತ್ಯುನ್ನತ ನಾಗರಿಕರನ್ನಾಗಿ ನಿರ್ಮಾಣ ಮಾಡಬೇಕೆಂಬುದು ಅವರ ಕನಸಾಗಿದೆ. ನಿವೃತ್ತಿಯ ನಂತರವೂ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರಲಿ ಎಂದರು.
ಅಭಿನಂದನೆ ಸ್ವೀಕರಿಸಿದ ಅಪ್ಪಾರಾವ ಪಾಟೀಲ ಕಂದಗೂಳ ಅವರು ಮಾತನಾಡಿ ಮೂರು ದಶಕಗಳ ಕಾಲ ಒಬ್ಬ ಶಿಕ್ಷಕನಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಪ್ರಯತ್ನ ಮಾಡಿದ್ದೇನೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಉತ್ತಮ ನಡತೆಯ ಕುರಿತು ಪಾಠ ಮಾಡಿದರೆ ಮಕ್ಕಳು ಭವ್ಯ ಭಾರತದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ. ಶಾಲೆಯ ಬಂದ ನಂತರವೂ ಪಾಲಕರು ಮನೆಯಲ್ಲಿ ತಮ್ಮ ಮಕ್ಕಳಿಗೆ ಆಟ ಪಾಠದ ಕುರಿತು ತಿಳಿಹೇಳಬೇಕು. ಅವರ ಚಟುವಟಿಕೆಗಳ ಮೇಲೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ಮುಖಂಡರಾದ ಶಿವಾಜಿ ತಡಮಾಲೆ ಜಮಗಿ, ದಯಾನಂದ ಬಿರಾದಾರ, ಭಾನುದಾಸ ಪಾಟೀಲ, ಆಕಾಶ ಪಾಟೀಲ ಕಂದಗೂಳ, ಜ್ಞಾನೋಬಾ ಪಾಟೀಲ ಸೇರಿದಂತೆ ಔರಾದ ತಾಲೂಕಿನ ಹಲವು ಗ್ರಾಮದ ಮುಖಂಡರು, ಪಾಟೀಲ ಕುಟುಂಬಸ್ಥರು ಉಪಸ್ಥಿತರಿದ್ದು ಅಪ್ಪಾರಾವ ಪಾಟೀಲ ಕಂದಗೂಳ ಅವರಿಗೆ ಸನ್ಮಾನಿಸಿ ಗೌರವಿಸಿದರು.






























