Home ಜಿಲ್ಲೆ ಕಲಬುರಗಿ ಸರಕಾರ ಪಂಚಾಯತಿ ಚುನಾವಣೆ ಶೀಘ್ರದಲ್ಲಿ ನಡೆಸುವಂತೆ ರಮೇಶ್ ಎಂ ಜಮಾದಾರ ಆಗ್ರಹ

ಸರಕಾರ ಪಂಚಾಯತಿ ಚುನಾವಣೆ ಶೀಘ್ರದಲ್ಲಿ ನಡೆಸುವಂತೆ ರಮೇಶ್ ಎಂ ಜಮಾದಾರ ಆಗ್ರಹ

ಅಫಜಲಪೂರ,ಆ.8-ರಾಜ್ಯ ಸರಕಾರ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಶೀಘ್ರದಲ್ಲಿ ನಡೆಸಬೇಕು ಎಂದು ರಾಷ್ಟೀಯವಾದಿ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ರಮೇಶ ಎಂ ಜಮಾದಾರ ಅವರು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಎಸ್ ಐ ಆರ್ ಕೆಲಸ ಮುಗಿದ ಕೂಡಲೇ ಶೀಘ್ರ ಗ್ರಾಮ ಪಂಚಾಯತಿ ಸದಸ್ಯರ ಮೀಸಲಾತಿ ಪ್ರಕಟಿಸಬೇಕು. ನಂತರ ಚುನಾವಣೆ ದಿನಾಂಕವನ್ನು ನಿಗದಿ ಮಾಡಬೇಕು. ಒಂದು ವೇಳೆ ಸರಕಾರ ನಿರ್ಲಕ್ಷ ಮಾಡಿದ್ದರೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರಕಾರಕ್ಕೆ ರಮೇಶ ಜಮಾದಾರ ಎಚ್ಚರಿಕೆ ನೀಡಿದ್ದಾರೆ.
ಸರಕಾರ ಇಂದಲ್ಲ,ನಾಳೆ ಚುನಾವಣೆ ಮಾಡುತ್ತದೆ ಎಂದು ಆಯಾ ರಾಜಕೀಯ ಪಕ್ಷದ ಕಾರ್ಯಕರ್ತರು ಕಾಯುತ್ತಿದ್ದಾರೆ. ಒಂದು ವೇಳೆ ಸರಕಾರಕ್ಕೆ ಚುನಾವಣೆ ನಡೆಸಲು ಮನಸಿಲ್ಲದಿದ್ದರೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ರದ್ದು ಪಡಿಸಲಾಗಿದೆ ಎಂಬ ಆದೇಶವನ್ನಾದರೂ ಹೊರಡಿಸಿದರೆ ಕಾರ್ಯಕರ್ತರು ಅದರ ಆಸೆ ಬಿಟ್ಟು ಬಿಡುತ್ತಾರೆ ಎಂದರು. ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬಾರದ ಕಾರಣ ರೈತರು ಮತ್ತು ಕೂಲಿ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದೆ. ಹಳ್ಳಿಗಳಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗಿದೆ. ಗ್ರಾಮ ಪಂಚಾಯತ್ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಾರದ ಕಾರಣ ವಿಬಿಜಿರಾಮ್ ಜಿ ಕಾಮಗಾರಿಗಳು ಕ್ರಿಯಾಯೋಜನೆ ಮಾಡಿದರು ಅನುಷ್ಠಾನಕ್ಕೆ ಬಂದಿಲ್ಲ. ಹಿಂದಿನ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ಆಯಾ ಗ್ರಾಮ ಪಂಚಾಯತ್ ಗಳಿಗೆ ಅನುದಾನ ಮಂಜೂರು ಮಾಡಿದ್ದಾರೆ.ಆದರೆ ಕ್ರಿಯಾಯೋಜನೆ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದು ರಮೇಶ ಎಂ ಜಮಾದಾರ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.