
ಹುಳಿಯಾರು, ಜೂ. ೨- ಮಕ್ಕಳ ನಿತ್ಯದ ಅಭ್ಯಾಸಗಳ ಬಗ್ಗೆ ಪೋಷಕರು ಹೆಚ್ಚು ಕಾಳಜಿ ವಹಿಸುವ ಮೂಲಕ ಮಕ್ಕಳು ಹಾದಿ ತಪ್ಪದಂತೆ ಎಚ್ಚರವಹಿಸಿ ಉತ್ತಮ ಭವಿಷ್ಯ ರೂಪಿಸಿಕೊಡಬೇಕು ಎಂದು ಹುಳಿಯಾರು ಆರೋಗ್ಯ ಇಲಾಖೆಯ ಆರೋಗ್ಯ ಮೇಲ್ವಿಚಾರಕ ರೇಣುಕಾ ರಾಜ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ಏರ್ಪಡಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಂಬಾಕು, ಸಿಗರೇಟು ಸೇರಿದಂತೆ ಮಾದಕ ವಸ್ತುಗಳ ಬಗ್ಗೆ ಮಕ್ಕಳು ಹಾಗೂ ಯುವಕರು ಹೆಚ್ಚು ಆಕರ್ಷಣೆಗೆ ಒಳಗಾಗುವುದರಿಂದ ವ್ಯಸನಗಳಿಗೆ ಬಲಿಯಾಗಿ ಮಕ್ಕಳ ಭವಿಷ್ಯ ಹಾಳಾಗುವ ಆತಂಕ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಹವ್ಯಾಸ, ದಿನನಿತ್ಯದ ಚಟುವಟಿಕೆಗಳ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಯಳನಾಡು ವಲಯ ಮೇಲ್ವಿಚಾರಕ ಕೇಶವಮೂರ್ತಿ ಆರ್., ತಾಲ್ಲೂಕು ವಿಚಕ್ಷಣಾಧಿಕಾರಿ ವಿಶ್ವನಾಥ್, ಕೃಷಿ ಮೇಲ್ವಿಚಾಲಕ ಮಂಜುನಾಥ್, ಸೇವಾ ಪ್ರತಿನಿಧಿ ಯಶಸ್ವಿನಿ, ಸಿಎಸ್ಸಿ ಸೆಂಟರ್ನ ಕಾವ್ಯ, ಸಂಘದ ಸದಸ್ಯರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


































