
ಕಲಬುರಗಿ,ನ.17: ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 2026-27ನೇ ಸಾಲಿನ ಭದ್ರತಾ ಹಾಗೂ ಸ್ವಚ್ಛತಾ ಸಿಬ್ಬಂದಿಗಳ ಹೊರಗುತ್ತಿಗೆ ಟೆಂಡರ್ ಪಡೆದಿರುವ ಏಜೆನ್ಸಿಯ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು, ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಕಪ್ಪುಪಟ್ಟಿಗೆ ಸೇರಿರುವ ಕುರಿತ ದಾಖಲೆಗಳ ಪರಿಶೀಲನೆ ಹಾಗೂ ಟೆಂಡರ್ ರದ್ದುಪಡಿಸುವ ಕುರಿತು ಕೃಷಿ ಮಾರಾಟ ಇಲಾಖೆ ಮುಖ್ಯ ನಿರ್ದೇಶಕರಿಗೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಮುಖ್ಯ ನಿರ್ದೇಶಕರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ತನಿಖೆಗೆ ಆದೇಶಿಸಲಾಗುವದು.ಶೀಘ್ರವೆ ತನಿಖಾ ತಂಡ ಆಗಮಿಸಲಿದೆ ಎಂದರು
ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಸುಮಾರು 62 ಭದ್ರತಾ ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಕೆಲವು ಸಿಬ್ಬಂದಿಗಳು ಕಳೆದ 12ರಿಂದ 15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, 2026-27ನೇ ಸಾಲಿಗೆ ಭದ್ರತಾ ಹಾಗೂ ಸ್ವಚ್ಛತಾ ಸಿಬ್ಬಂದಿಗಳ ಗುತ್ತಿಗೆ ಪಡೆದಿರುವ ಕೌಶಲ್ಯ ಏಜೆನ್ಸಿಯು ಸುಮಾರು 13 ಸಿಬ್ಬಂದಿಗಳನ್ನು ಯಾವುದೇ ಸಮರ್ಪಕ ಕಾರಣ ಹಾಗೂ ಪಾರದರ್ಶಕ ಪ್ರಕ್ರಿಯೆಯಿಲ್ಲದೆ ಕೆಲಸದಿಂದ ತೆಗೆದುಹಾಕಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಏಜೆನ್ಸಿಯವರು ಸಿಬ್ಬಂದಿಗಳನ್ನು ಕೆಲಸದಲ್ಲಿ ಮುಂದುವರಿಸಲು ರೂ. 50 ರಿಂದ ?60 ಸಾವಿರದವರೆಗೆ ಹಣ ನೀಡಬೇಕೆಂದು ಒತ್ತಾಯಿಸಿರುವುದು, ಹಣ ನೀಡದಿದ್ದಲ್ಲಿ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಿರುವುದು ಹಾಗೂ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡಿರುವುದು ಸೇರಿದಂತೆ ಹಲವು ಗಂಭೀರ ಆರೋಪಗಳು ಗಮನಕ್ಕೆ ಬಂದಿವೆ.
ಇದು ಕೇವಲ ಕಾರ್ಮಿಕರ ಉದ್ಯೋಗದ ಸಮಸ್ಯೆಯಲ್ಲ; ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಬಡ ಕಾರ್ಮಿಕರ ಜೀವನೋಪಾಯ, ಕಾರ್ಮಿಕರ ಹಕ್ಕುಗಳು ಹಾಗೂ ಸರ್ಕಾರಿ ಗುತ್ತಿಗೆ ವ್ಯವಸ್ಥೆಯ ಪಾರದರ್ಶಕತೆಗೆ ಸಂಬಂಧಿಸಿದ ಗಂಭೀರ ವಿಚಾರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಕುರಿತು ತನಿಖೆಗೆ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ವೇದಿಕೆ ರಾಜ್ಯ ಅಧ್ಯಕ್ಷರಾದ ಜಯಂತಿಗೌಡ, ಸುನಿತಾ ಎಸ್, ಸವಿತಾ ಸಿ ಎಸ್, ಸಲೀಂ ಖಾನ್, ಅಖಂಡ ಕರ್ನಾಟಕ ರಕ್ಷಣಾ ಸಮಿತಿಯ ಟಿ ಜಿ ರವಿಕುಮಾರ್, ಅಖಂಡ ಕರ್ನಾಟಕ ರಕ್ಷಣಾ ಸಮಿತಿ ಉಪಾಧ್ಯಕ್ಷ ಆರ್ ಸಿ ಹನುಮಂತರಾಯ, ಸಂವಿಧಾನ ಸಾಮ್ರಾಟ್ ಅಂಬೇಡ್ಕರ್ ಸೇನೆಯ ಕರಿಯಪ್ಪಾ ಗಚ್ಚಿನಮನಿ ಇದ್ದರು

















