
ಬೀದರ್: ಜಗಜ್ಯೋತಿ ಬಸವಣ್ಣನವರು ೧೨ನೇ ಶತಮಾನದಲ್ಲೇ ಜಾತಿ ರಹಿತ ಸಮಾಜ, ಅಂತರಜಾತಿ ವಿವಾಹ ಮೊದಲಾದ ಸಾಮಾಜಿಕ ಪಿಡುಗುಗಳನ್ನು ಕಿತ್ತೊಗೆಯಲು ಕರೆ ಕೊಟ್ಟರೂ ಇನ್ನೂ ಆ ಸಾಮಾಜಿಕ ಪಿಡುಗುಗಳು ಅಸ್ತಿತ್ವದಲ್ಲಿರುವುದು ವಿಷಾದನೀಯ. ಪಠ್ಯಕ್ರಮದಲ್ಲಿ ವಸ್ತುನಿಷ್ಠ ಇತಿಹಾಸವನ್ನು ಅಳವಡಿಸಬೇಕು ಎಂದು ಶಿಕ್ಷಣ ತಜ್ಞ ಡಾ.ಬಸವರಾಜ ಪಾಟೀಲ ಅಸ್ಟೂರು ಕರೆ ನೀಡಿದರು.
ಅವರು ಇಂದು ನಗರದಲ್ಲಿ ನವದೆಹಲಿಯ ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನಾವು ಭಾರತೀಯ ಇತಿಹಾಸ ಸಂಕಲನ ಕರ್ನಾಟಕದ ಸಹಯೋಗದಲ್ಲಿ ಪ್ರಾಂತ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶ್ರೀ ಬಸವೇಶ್ವರರು ಸಾಮಾಜಿಕ ನ್ಯಾಯ ಸ್ಥಾಪಿಸಲು ಹೋರಾಡಿದ ಮಹಾನ್ ಪ್ರವರ್ತಕರಾಗಿದ್ದಾರೆ. ಅವರಿಗೆ ಜನ್ಮ ನೀಡಿದ ಸ್ಥಳ ಬಸವನಬಾಗೆವಾಡಿಯಾದರೂ ಕಾರ್ಯಸ್ಥಾನ ಬೀದರ್ ಜಿಲ್ಲೆಯಾಗಿದೆ. ಆದರೆ ಇಂದಿಗೂ ನಾವು ಅವರ ತತ್ವ ಪಾಲನೆ ಮಾಡುತ್ತಿಲ್ಲ ಎಂದ ಅವರು ೯ನೇ ಶತಮಾನದಲ್ಲೇ ದೇಶಕ್ಕೆ ಹಿಂದೂ ಕಾನೂನು ಶಾಸ್ತ್ರ ನೀಡಿದ ವಿಜ್ಞಾನೇಶ್ವರ ಬೀದರ ಜಿಲ್ಲೆಯವನು. ಅವನ ಮಿತಾಕ್ಷರ ಗ್ರಂಥ ಇಂದಿಗೂ ಕಾನೂನು ರಚನಾಕಾರರಿಗೆ ಆಕರ ಗ್ರಂಥವಾಗಿದೆ ಎಂದರು.
೬ನೇ ಶತಮಾನದಲ್ಲೇ ಶಸ್ತ್ರ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದ್ದ ಚರಕ, ಸೊನ್ನೆಯ ಮಹತ್ವ ಸಾರಿದ ಬ್ರಹ್ಮ ಗುಪ್ತ ಮೊದಲಾದ ಶ್ರೇಷ್ಠ ವ್ಯಕ್ತಿಗಳ ಬಗ್ಗೆ ಮಾಹಿತಿ ಇಂದಿನ ಪಠ್ಯ ಪುಸ್ತಕಗಳಲ್ಲಿ ಇಲ್ಲದಿರುವುದು ನಮ್ಮ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೀದರ್ ಜಿಲ್ಲೆ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದ ಕಾರಣ ಭಾರತಕ್ಕೆ ಸ್ವಾಂತAತ್ರ್ಯ ಬಂದು ಒಂದು ವರ್ಷ ಕಳೆದರೂ ಭಾರತದ ಒಕ್ಕೂಟದಲ್ಲಿ ಸೇರಲಿಲ್ಲ. ಈ ಭಾಗದ ಜನರು ನಿರಂತರವಾಗಿ ನಿಜಾಮರ ರಜಾಕಾರರ ದಾಳಿಗೆ ತುತ್ತಾಗುತ್ತಿದ್ದರು. ಎಐಸಿಸಿಯ ಹಾಲಿ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವೂ ಈ ದಾಳಿಗೆ ಹೊರತಾಗಿರಲಿಲ್ಲ. ಹಿಂದೂ ಸಂಘಟನೆಯೇ ಆ ದಾಳಿಕಾರರ ಹಲ್ಲೆಗಳಿಂದ ಖರ್ಗೆ ಕುಟುಂಬವನ್ನು ರಕ್ಷಿಸಿತ್ತು. ಆದರೂ ಖರ್ಗೆ ಆ ಸಂಘಟನೆಗಳನ್ನು ವಿರೋಧಿಸುತ್ತಿದ್ದಾರೆ ಎಂದರು.
ಇತಿಹಾಸ ಸಂಕಲನ ಯೋಜನಾದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯರ್ಶಿ ಡಾ.ಬಾಲಮುಕುಂದ ಪಾಂಡೆ ಮಾತನಾಡಿ, ಇಂಗ್ಲಿಷ್ ಒಂದು ಅಸುರ ಬಾಷೆಯಾಗಿದ್ದು, ಬಲಾತ್ಕಾರವಾಗಿ ಇಂಗ್ಲಿಷನ್ನು ಜನತೆಯ ಮೇಲೆ ಹೇರಲಾಗಿತ್ತು. ಆ ಭಾಷೆ ಬಲ್ಲವರಿಗೆ ಮಾತ್ರ ಸರ್ಕಾರಿ ನೌಕರಿ, ಸೌಲಭ್ಯ ನೀಡುವುದಾಗಿ ಬ್ರಿಟಿಷರು ಅಮಿಷ ಒಡ್ಡಿದ್ದರಿಂದ ಭಾರತದಾದ್ಯಂತ ಇಂಗ್ಲಿಷ್ ಪ್ರಸಿದ್ಧಿಯಾಯಿತು. ಆದರೆ ಇಂದಿನ ಭಾರತ ಸರ್ಕಾರ ಇಂಗ್ಲಿಷ್ ಭಾಷೆಗೆ ಇತಿಶ್ರೀ ಹಾಡಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ಮುಂದಿನ ೧೫ ವರ್ಷಗಳಲ್ಕಿ ಭಾರತದಲ್ಲಿ ಇಂಗ್ಲಿಷ್ ಭಾಷೆ ನಶಿಸಿ ಭಾರತೀಯ ಎಲ್ಲ ಭಾಷೆಗಳೂ ರಾಷ್ಟ್ರ ಭಾಷೆಗಳಾಗುತ್ತವೆ. ಹಿಂದಿ ರಾಜ ಭಾಷೆ ಯಾಗುತ್ತದೆ ಎಂದರು.
ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ನೀತಿಯಿಂದಾಗಿ ಸ್ಥಳೀಯರಿಗೆ ಅವರ ಭವ್ಯ ಇತಿಹಾಸವೇ ತಿಳಿಯದಂತೆ ಮಾಡಲಾಗಿದೆ. ಭಾರತೀಯ ದೃಷ್ಟಿಯಲ್ಲಿ ನೈಜ ಇತಿಹಾಸ ತಿಳಿಸಿವ ನಿಟ್ಟಿನಲ್ಲಿ ಇತಿಹಾಸ ಸಂಕಲನ ಯೋಜನಾ ಕಾರ್ಯ ನಿರ್ವಹಿಸುತ್ತಿದೆ. ಸ್ವಾಭಿಮಾನ ಹುಟ್ಟಿಸುವ ಇತಿಹಾಸ ತಿಳಿಸುವ ಕೆಲಸ ಮಾಡುತ್ತಿದೆ ಎಂದರು.
ಸಮಾರAಭದ ಅಧ್ಯಕ್ಷತೆಯನ್ನು ಸಂಕಲನ ಯೋಜನಾದರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರೊ.ಈಶ್ವರ ಶರಣ ವಿಶ್ವಕರ್ಮ ವಹಿಸಿದ್ದರು. ಆರ್.ಎಸ್.ಎಸ್.ವಿಭಾಗೀಯ ಸಂಚಾಲಕ ಅನಂತರಾವ್ ಪಾಟೀಲ್, ಗುರುನಾನಕ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಬಲಬೀರ್ ಸಿಂಘ್, ಶಾಸಕ ಶೈಲೇಂದ್ರ ಬೆಲ್ದಾಳೆ, ಸಂಕಲನ ಯೋಜನಾದ ರಾಷ್ಟ್ರಾಧ್ಯಕ್ಷ ಪ್ರೊ.ಎಂ.ಕೊಟ್ರೇಶ್ ಪ್ರಮುಖರಾದ ಡಾ.ಹೇಮಂತ್ ಧಿಂಗ್ ಮಜುಮದಾರ್, ಡಾ.ಶಿವಕುಮಾರ್ ಉಪ್ಪೆ, ಡಾ.ಪ್ರಥ್ವಿರಾಜ್, ಪ್ರೊ.ಹರಿಕೃಷ್ಣ ಮಿಶ್ರಾ, ಕುಶಲ್ ರಾವ್ ಪಾಟೀಲ್, ಬಸವಕುಮಾರ್ ಪಾಟೀಲ್, ಡಾ.ಸಂದೀಪ್ ತಾಂದಲೆ, ಡಾ.ವೀರಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ, ಡಾ.ಬಾಲಕೃಷ್ಣ ಹೆಗಡೆ, ಡಾ.ಡಾ.ಎನ್.ಸಂಜೀವ ರೆಡ್ಡಿ ಡಾ.ನರೇಂದ್ರ ಕೆ. ಮೊದಲಾದವರಿದ್ದರು.





























