Home ಜಿಲ್ಲೆ ಬೆಂಗಳೂರು ದೇಶಾದ್ಯಂತ ನೀಟ್-ಯುಜಿ ಪರೀಕ್ಷೆ: ಬಿಗಿಭದ್ರತೆ

ದೇಶಾದ್ಯಂತ ನೀಟ್-ಯುಜಿ ಪರೀಕ್ಷೆ: ಬಿಗಿಭದ್ರತೆ

ಬೆಂಗಳೂರು, ಜೂ.೨೧: ಕಳೆದ ವರ್ಷದ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ದೇಶದಾದ್ಯಂತ ಇಂದು ನಡೆಯಲಿರುವ ನೀಟ್-ಯುಜಿ ವೈದ್ಯಕೀಯ ಪದವಿ ಪ್ರವೇಶ ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಓಖಿಂ) ಈ ಬಾರಿ ಅಭೂತಪೂರ್ವ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ದೇಶದಾದ್ಯಂತ ಸುಮಾರು ೨೨ ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿದೆ. ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೫.೧೫ರವರೆಗೆ ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷೆ ಅವಧಿಯನ್ನು ೧೫ ನಿಮಿಷ ಕಾಲ ವಿಸ್ತರಿಸಲಾಗಿದೆ.


ಬೆಂಗಳೂರಿನಲ್ಲಿ ೪೬ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಮಲ್ಲೇಶ್ವರದ ಸರ್ಕಾರಿ ಪಿಯು ಕಾಲೇಜು ಸೇರಿದಂತೆ ಎಲ್ಲಾ ಕೇಂದ್ರಗಳಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಪರೀಕ್ಷಾ ಕೊಠಡಿಗಳಲ್ಲಿ ೧೨ರಿಂದ ೨೪ ಅಭ್ಯರ್ಥಿಗಳನ್ನು ಮಾತ್ರ ಕೂರಿಸುವ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಕೊಠಡಿಗೂ ಇಬ್ಬರು ಇನ್ವಿಜಿಲೇಟರ್‌ಗಳನ್ನು ನಿಯೋಜಿಸಲಾಗಿದೆ.


ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ:
ಈ ಬಾರಿ ಪ್ರತಿಯೊಬ್ಬ ಅಭ್ಯರ್ಥಿಯೂ ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಬಯೋಮೆಟ್ರಿಕ್ ಪರಿಶೀಲನೆ, ಮುಖ ಗುರುತಿಸುವಿಕೆ ಹಾಗೂ ದೈಹಿಕ ತಪಾಸಣೆಗೆ ಒಳಗಾಗಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುತ್ತದೆ. ಜೊತೆಗೆ ನಿಗದಿಪಡಿಸಿರುವ ಡ್ರೆಸ್ ಕೋಡ್ ಅನ್ನು ಕಡ್ಡಾಯವಾಗಿ ಪಾಲಿಸಬೇಕು.


ವಾಯುಪಡೆಯ ಮೂಲಕ ಪ್ರಶ್ನೆಪತ್ರಿಕೆ ಸಾಗಾಟ
ಪ್ರಶ್ನೆಪತ್ರಿಕೆಗಳ ಭದ್ರತೆಗೆ ಈ ಬಾರಿ ಮೊದಲ ಬಾರಿಗೆ ಭಾರತೀಯ ವಾಯುಪಡೆಯ ಮೂಲಕ ಪ್ರಶ್ನೆಪತ್ರಿಕೆಗಳನ್ನು ಸಾಗಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ತಲುಪುವವರೆಗೆ ಸಿಬ್ಬಂದಿ ಕಟ್ಟುನಿಟ್ಟಿನ ಭದ್ರತೆ ಒದಗಿಸಿದ್ದಾರೆ.


ಎಐ ಆಧಾರಿತ ಸಿಸಿಟಿವಿ ನಿಗಾ:
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಮೆಟಲ್ ಡಿಟೆಕ್ಟರ್, ಆಧಾರ್ ಲಿಂಕ್ಡ್ ಬಯೋಮೆಟ್ರಿಕ್ ವ್ಯವಸ್ಥೆ, ಲೈವ್ ಫೇಸ್ ರೆಕಗ್ನಿಷನ್ ಹಾಗೂ ಎಐ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಪರೀಕ್ಷಾ ಕೊಠಡಿಯೂ ನಾಲ್ಕು ಹಂತದ ಸಿಸಿಟಿವಿ ನಿಗಾದಲ್ಲಿದ್ದು, ಕೇಂದ್ರ ನಿಯಂತ್ರಣ ಕೊಠಡಿಯಿಂದ ನೇರ ಮೇಲ್ವಿಚಾರಣೆ ನಡೆಯಲಿದೆ.


ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಗಾವಲು
ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯಲು ನೀಟ್ ವಿಶೇಷ ಜಾಗ್ರತಾ ತಂಡವನ್ನು ರಚಿಸಿದೆ. ಸಾಮಾಜಿಕ ಜಾಲತಾಣಗಳ ಮೇಲೂ ನಿರಂತರ ನಿಗಾ ಇರಲಿದ್ದು, ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ವದಂತಿಗಳಿಗೆ ಕಿವಿಗೊಡದಂತೆ ಅಭ್ಯರ್ಥಿಗಳಿಗೆ ಮನವಿ ಮಾಡಲಾಗಿದೆ.


ಕಳೆದ ವರ್ಷದ ವಿವಾದದ ಹಿನ್ನೆಲೆ ಈ ಬಾರಿ ಪರೀಕ್ಷೆ ಸಂಪೂರ್ಣ ನ್ಯಾಯಸಮ್ಮತ, ಪಾರದರ್ಶಕ ಹಾಗೂ ಅಕ್ರಮಮುಕ್ತವಾಗಿ ನಡೆಯುವಂತೆ ಕೇಂದ್ರ ಸರ್ಕಾರ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸಿದೆ.

ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ
ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್-ಯುಜಿ ಮರುಪರೀಕ್ಷೆ ಇಂದು ನಡೆಯಲಿದ್ದು, ನಿರ್ಭೀತಿಯಿಂದ ಯಾವುದೇ ಆತಂಕವಿಲ್ಲದೆ ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಲಹೆ ನೀಡಿದ್ದಾರೆ.


ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ , ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.


ಇಂದು ೨೨ ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದಾರೆ. ನಿರ್ಭೀತಿಯಿಂದ ಯಾವುದೇ ಆತಂಕವಿಲ್ಲದೆ ಪರೀಕ್ಷೆಗೆ ಹಾಜರಾಗಬೇಕು. ಖಂಡಿತವಾಗಿಯೂ ಉತ್ತಮ ಸಾಧನೆ ಮಾಡಲಿದ್ದಾರೆ. ವಿದ್ಯಾರ್ಥಿಗಳಿಗೆ ನನ್ನ ಶುಭಹಾರೈಕೆಗಳು’ ಎಂದು ಅವರು ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ದಯವಿಟ್ಟು ದೇಶ ನವಪೀಳಿಗೆಯ ಭವಿಷ್ಯದ ಜೊತೆ ಆಟವಾಡಬೇಡಿ’ ಎಂದು ಮನವಿ ಮಾಡಿದ್ದಾರೆ


ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸವನ್ನು ಮಾಡಬೇಡಿ. ಕೆಲವೇ ಗಂಟೆಗಳ ನಂತರ ಮಕ್ಕಳು ಪರೀಕ್ಷೆಗೆ ಹಾಜರಾಗಲಿದ್ದಾರೆ’ ಎಂದು ಅವರು ಹೇಳಿದ್ದಾರೆ.


ಕನಿಷ್ಠ ಪಕ್ಷ ನೀವು ಜವಾಬ್ದಾರಿಯುತವಾಗಿದ್ದರೆ, ಭಾರತೀಯ ಪ್ರಜೆ ಎಂದು ಪರಿಗಣಿಸಿದ್ದರೆ ದಯವಿಟ್ಟು ಮಕ್ಕಳಿಗೆ ತೊಂದರೆ ಕೊಡಬೇಡಿ’ ಎಂದು ವಿನಂತಿಸಿದ್ದಾರೆ.


ನೀಟ್ ಸೇರಿದಂತೆ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆ ಹಾಗೂ ಅಕ್ರಮಗಳ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶನಿವಾರ ಎರಡನೇ ಸಲ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.