
ಬೆಂಗಳೂರು,ಜೂ.೨೧- ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಕ್ರಮವಾಗಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
ಭಾರತದ ಚುನಾವಣಾ ನಿಯಮಗಳ ಪ್ರಕಾರ, ಒಬ್ಬ ನಾಗರಿಕ ದೇಶದ ಯಾವುದೇ ಒಂದು ಕಡೆಯಲ್ಲಿ ಮಾತ್ರ ಮತದಾರರ ಗುರುತಿನ ಚೀಟಿ ಹೊಂದಲು ಅವಕಾಶವಿದೆ. ಆದರೆ, ನಟ ಪ್ರಕಾಶ್ ರಾಜ್ ಅವರು ನಿಯಮಗಳನ್ನು ಗಾಳಿಗೆ ತೂರಿ ದಕ್ಷಿಣ ಭಾರತದ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಕಾಶ್ ರಾಜ್ ಹೆಸರಿನಲ್ಲಿ ವೋಟರ್ ಐಡಿಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಇದು ಕಾನೂನಿನ ಪ್ರಕಾರ ಗಂಭೀರ ಅಪರಾಧವಾಗಿದೆ.
ಕೋರ್ಟ್ ಮೆಟ್ಟಿಲೇರಿದ್ದ ದೂರು:
ಈ ಅಕ್ರಮದ ಕುರಿತಾಗಿ ದಿಲೀಪ್ ಕುಮಾರ್ ಎಂಬುವವರು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಈ ಹಿಂದೆ ನಟ ಪ್ರಕಾಶ್ ರಾಜ್ ಅವರಿಗೆ ಎರಡು ಬಾರಿ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಆದೇಶಕ್ಕೆ ಕ್ಯಾರೆ ಎನ್ನದ ನಟ:
ನ್ಯಾಯಾಲಯ ನೀಡಿದ ಎರಡು ಸಮನ್ಸ್ಗಳಿಗೂ ಬೆಲೆ ಕೊಡದ ಪ್ರಕಾಶ್ ರಾಜ್, ವಿಚಾರಣೆಗೆ ಹಾಜರಾಗದೆ ಗೈರುಳಿದಿದ್ದರು. ನ್ಯಾಯಾಲಯದ ಆದೇಶವನ್ನು ಪದೇ ಪದೇ ನಿರ್ಲಕ್ಷಿಸಿದ ನಟನ ವರ್ತನೆಗೆ ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೋರ್ಟ್ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅವರ ವಿರುದ್ಧ ಈಗ ನೇರವಾಗಿ ಜಾಮೀನು ರಹಿತ ವಾರಂಟ್ ಹೊರಡಿಸಿದೆ.ಸದಾ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳಲ್ಲಿ ಸಕ್ರಿಯರಾಗಿರುವ ಪ್ರಕಾಶ್ ರಾಜ್ ಅವರಿಗೆ ಈ ಅಕ್ರಮ ಮತದಾರರ ಗುರುತಿನ ಚೀಟಿ ಪ್ರಕರಣವು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಾರಾ ಅಥವಾ ಕಾನೂನು ಹೋರಾಟ ಮುಂದುವರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.




























