Home ಜಿಲ್ಲೆ ಕಲಬುರಗಿ ತಾಲೂಕು ಕ್ರೀಡಾಂಗಣಕ್ಕೆ ಅನುದಾನ ಕೊರತೆ ಇಲ್ಲ: ಡಾ. ಅವಿನಾಶ್ ಜಾಧವ ಭರವಸೆ

ತಾಲೂಕು ಕ್ರೀಡಾಂಗಣಕ್ಕೆ ಅನುದಾನ ಕೊರತೆ ಇಲ್ಲ: ಡಾ. ಅವಿನಾಶ್ ಜಾಧವ ಭರವಸೆ

ಚಿಂಚೋಳಿ: ಪಟ್ಟಣದ ಹೊರವಲಯದಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ, ಕಲಬುರಗಿ ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 2026-27ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಶಾಸಕರಾದ ಡಾ. ಅವಿನಾಶ್ ಜಾಧವ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತಾಲ್ಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಈಗಾಗಲೇ ಕೆಕೆಆರ್‍ಡಿಪಿ ಯೋಜನೆಯಡಿ ಎರಡು ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕ್ರೀಡಾಂಗಣದ ಅಭಿವೃದ್ಧಿಗೆ ಇನ್ನಷ್ಟು ಅನುದಾನ ನೀಡಲು ತಾವು ಬದ್ಧರಾಗಿದ್ದೇವೆ ಎಂದ ಅವರು, ಈ ಕ್ರೀಡಾಂಗಣವನ್ನು ತಮ್ಮ ತಂದೆಯಾದ ಡಾ. ಉಮೇಶ್ ಜಾಧವ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಯುವಕರಿಗಾಗಿ ನಿರ್ಮಿಸಿದ್ದನ್ನು ಸ್ಮರಿಸಿದರು. ಅದರಂತೆ, ತಾವು ಕೂಡ ಕ್ರೀಡಾಂಗಣದ ಅಭಿವೃದ್ಧಿಗೆ ವಿಶೇಷ ಗಮನ ಹರಿಸುತ್ತಿದ್ದೇನೆ ಎಂದು ಹೇಳಿದರು.
ತಾಲ್ಲೂಕಿನ ಯುವಕರು ಈ ಕ್ರೀಡಾಂಗಣವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, “ಕ್ರೀಡೆಯಲ್ಲಿ ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಕ್ರೀಡಾಸ್ಫೂರ್ತಿಯೇ ನಿಜವಾದ ಗೆಲುವು” ಎಂದು ತಿಳಿಸಿದರು. ಕ್ರೀಡಾಕೂಟದ ಮೂಲಕ ಕ್ರೀಡಾಪಟುಗಳ ಆತ್ಮವಿಶ್ವಾಸ, ಪರಿಶ್ರಮ ಮತ್ತು ಪ್ರತಿಭೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ನಾಗಶೆಟ್ಟಿ ಭದರಶೆಟ್ಟಿ, ಮಲ್ಲಿಕಾರ್ಜುನ ನೆಲ್ಲಿ, ರಾಜಶೇಖರ್ ಮುಸ್ತರಿ, ಶಾಮರಾವ, ಬಿಜೆಪಿ ಮುಖಂಡರಾದ ವಿಜಯಕುಮಾರ ಚೇಂಗಟೆ, ಗೋಪಾಲರಾವ ಕಟ್ಟಿಮನಿ, ಚಂದ್ರಶೇಖರ್ ಗುತ್ತೇದಾರ, ಕೆ.ಎಂ. ಬಾರಿ, ಅಶೋಕ್ ಚೌವ್ಹಾಣ, ಶ್ರೀಮಂತ ಕಟ್ಟಿಮನಿ, ರಾಜು ಪವಾರ, ಸಂತೋಷ್ ಗಡಂತಿ, ಶಿವಯೋಗಿ ರುಸ್ತಮಪೂರ, ಸತೀಶ್ ರೆಡ್ಡಿ, ಅನೀಲ ಕಂಟ್ಲಿ ಕಲ್ಲೂರು, ಅಲ್ಲಮಪ್ರಭು ಮಠಪತಿ, ಪ್ರಭಾಕರ್ ಗೌಡ ಬೈರಂಪಳ್ಳಿ, ಶಿವಶರಣಪ್ಪ ಡೆಂಗಿ, ಹನುಮಂತ್ ಭೋವಿ, ಶ್ರೀನಿವಾಸ್ ಚಿಂಚೋಳಿಕರ್ ಸೇರಿದಂತೆ ಅನೇಕ ಮುಖಂಡರು ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು.