
ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. ೩೦: ಸಾತ್ವಿಕ ರಾಜಕಾರಣಕ್ಕೆ ಹೆಸರಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿ ತೇಜೋವಧೆ ಮಾಡುವ ಪ್ರಯತ್ನವನ್ನು ವಿರೋಧಿಸಬೇಕು ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ ಜಿಗಜಿಣಗಿ ಅವರು ಜಿಲ್ಲೆಯ ಅಭಿವೃದ್ಧಿಗೆ ಲಕ್ಷ ಕೋಟಿ ರೂ.ಗೂ ಅಧಿಕ ಅನುದಾನ ತಂದು ರೈಲ್ವೆ ಓವರ್‌ಬ್ರಿಡ್ಜ್, ವಿಮಾನ ನಿಲ್ದಾಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಡಾ. ಸುಧಾ ಮೂರ್ತಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿ ಅವರೇ ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿ ಅವರ ಆಶೀರ್ವಾದ ಪಡೆದಿರುವುದನ್ನು ಮರೆತಿರಬಾರದು ಎಂದು ಟೀಕಿಸಿದರು.
ಜಾತಿ ಜನಗಣತಿ ವರದಿಯಲ್ಲಿ ಅನ್ಯಾಯ ನಡೆದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಸಚಿವರ ಆಪ್ತರ ಮನೆಗಳ ಮೇಲೆಯೇ ಲೋಕಾಯುಕ್ತ ದಾಳಿ ನಡೆಯುತ್ತಿರುವಾಗ ಮೊದಲು ತಮ್ಮ ಮನೆ ಶುದ್ಧೀಕರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪದ್ಮಶ್ರೀ ಪ್ರಶಸ್ತಿಯನ್ನು ನಿಸ್ವಾರ್ಥ ಸಾಧಕರಿಗೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಧಕರನ್ನು ಗುರುತಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಮುಖಂಡ ರವಿ ವಗ್ಗೆ, ಎಸ್‌ಇಪಿ-ಟಿಎಸ್‌ಪಿ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನದ ದುರ್ಬಳಕೆ ನಡೆದಿದೆ ಎಂದು ಆರೋಪಿಸಿ, ಈ ವಿಚಾರದಲ್ಲಿ ದಲಿತ ಸಂಘಟನೆಗಳು ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಈರಣ್ಣ ರಾವೂರ, ಮಳುಗೌಡ ಪಾಟೀಲ, ಸಿದ್ದು ಬುಳ್ಳಾ, ಮಂಜುನಾಥ ಮೀಸೆ, ವಿಜಯ ಜೋಶಿ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.































