Home ಮುಖಪುಟ ಸುದ್ದಿ ನ್ಯೂಜಿಲೆಂಡ್: ಭಾರತ ದ್ವಿಪಕ್ಷೀಯ ಒಪ್ಪಂದ ಐತಿಹಾಸಿಕ:ಮೋದಿ ಬಣ್ಣನೆ

ನ್ಯೂಜಿಲೆಂಡ್: ಭಾರತ ದ್ವಿಪಕ್ಷೀಯ ಒಪ್ಪಂದ ಐತಿಹಾಸಿಕ:ಮೋದಿ ಬಣ್ಣನೆ

ಆಕ್ಲೆಂಡ್,ಜು೧೧:ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದಲ್ಲಿ ಒಂದು ‘ಐತಿಹಾಸಿಕ ಮೈಲಿಗಲ್ಲು’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಈ ಮಹತ್ವದ ಒಪ್ಪಂದವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಅವರು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇಂದು ನ್ಯೂಜಿಲೆಂಡ್ ಪ್ರಧಾನಿ ಲಕ್ಸನ್ ಅವರೊಂದಿಗೆ ನಿಯೋಗ ಮಟ್ಟದ ಉನ್ನತ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ದೃಢ ಸಂಕಲ್ಪ ಮಾಡಿದರು.

ದ್ವಿಪಕ್ಷೀಯ ಸಭೆಯ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ಭಾರತದ ಪ್ರಧಾನಿಯೊಬ್ಬರು ಬರೋಬ್ಬರಿ ೪೦ ವರ್ಷಗಳ ನಂತರ ನ್ಯೂಜಿಲೆಂಡ್‌ಗೆ ಭೇಟಿ ನೀಡುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ. ನ್ಯೂಜಿಲೆಂಡ್‌ನ ಆರ್ಥಿಕ ರಾಜಧಾನಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಉಭಯ ದೇಶಗಳ ಬಾಂಧವ್ಯಕ್ಕೆ ಹೊಸ ಶಕ್ತಿ ತುಂಬುವ ಅವಕಾಶವನ್ನು ನೀವು ಕಲ್ಪಿಸಿಕೊಟ್ಟಿದ್ದೀರಿ. ಇದಕ್ಕೆ ನಾನು ಆಭಾರಿಯಾಗಿದ್ದೇನೆ. ನ್ಯೂಜಿಲೆಂಡ್ ಜನತೆ ಭಾರತದ ಮೇಲಿಟ್ಟಿರುವ ಪ್ರೀತಿಯನ್ನು ಕಂಡು ನನ್ನ ಹೃದಯ ತುಂಬಿ ಬಂದಿದೆ,” ಎಂದರು.

ಜಾಗತಿಕ ದಾಖಲೆಯ ಒಪ್ಪಂದ: “ಪ್ರಧಾನಿ ಲಕ್ಸನ್ ಅವರು ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿದ್ದಾಗ ಈ ಮುಕ್ತ ವ್ಯಾಪಾರ ಒಪ್ಪಂದದ ಪ್ರಕ್ರಿಯೆ ಆರಂಭವಾಗಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ ಇಡೀ ನ್ಯೂಜಿಲೆಂಡ್ ಒಗ್ಗಟ್ಟಾಗಿ ಈ ಒಪ್ಪಂದವನ್ನು ಕಾರ್ಯರೂಪಕ್ಕೆ ತಂದಿರುವುದು ಬಹುಶಃ ಜಾಗತಿಕ ಮಟ್ಟದಲ್ಲೇ ಮೊದಲ ಮತ್ತು ಅತ್ಯಂತ ವೇಗದ ಯಶಸ್ಸಾಗಿದೆ,” ಎಂದು ಮೋದಿ ಶ್ಲಾಘಿಸಿದರು.

“ಕಳೆದ ವರ್ಷ ನೀವು ಹೋಳಿ ಹಬ್ಬದ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ನಮ್ಮ ಬಾಂಧವ್ಯಕ್ಕೆ ಹೋಳಿಯ ಬಣ್ಣಗಳು ತುಂಬಿಕೊಂಡಿದ್ದವು. ಇಂದು ನಾವು ನಮ್ಮ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಯ ಮೂಲಕ ಮತ್ತಷ್ಟು ಗಟ್ಟಿಗೊಳಿಸುತ್ತಿದ್ದೇವೆ. ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನಮ್ಮ ಅಚಲ ನಂಬಿಕೆಯು ನಮ್ಮನ್ನು ನೈಸರ್ಗಿಕ ಪಾಲುದಾರರನ್ನಾಗಿ ಮಾಡಿದೆ. ಇದು ’ಪರಸ್ಪರ ಸೂಕ್ತವಾದ ಹೊಂದಾಣಿಕೆ’ ಎರಡು ಪ್ರಮುಖ ಸಾಗರ ರಾಷ್ಟ್ರಗಳಾಗಿ ಇಂಡೋ-ಪೆಸಿಫಿಕ್ ವಲಯದಲ್ಲಿ ನಮ್ಮ ಸಹಕಾರವು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಭದ್ರತೆಗೆ ಮಹತ್ವದ ಕೊಡುಗೆ ನೀಡಲಿದೆ,” ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಮಾತನಾಡಿ, “೪೦ ವರ್ಷಗಳ ನಂತರ ಭಾರತದ ಪ್ರಧಾನಿಯವರನ್ನು ಇಲ್ಲಿ ಸ್ವಾಗತಿಸುತ್ತಿರುವುದು ನಮ್ಮ ಹೆಮ್ಮೆ. ಅತ್ಯಂತ ಕಡಿಮೆ ಅವಧಿಯಲ್ಲಿ ನಾವು ಮುಕ್ತ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ಅಗಾಧ ಪ್ರಗತಿ ಸಾಧಿಸಿದ್ದೇವೆ. ಆದರೆ ಇಂದಿನ ಮಾತುಕತೆ ಕೇವಲ ಎಫ್‌ಟಿಎಗೆ ಮಾತ್ರ ಸೀಮಿತವಾಗಿಲ್ಲ. ಈ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಮತ್ತು ಇದನ್ನು ಮತ್ತಷ್ಟು ವಿಸ್ತರಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ,” ಎಂದರು.

ಭೇಟಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಜಿಲೆಂಡ್‌ನ ಪ್ರಮುಖ ಉದ್ಯಮಿಗಳು ಹಾಗೂ ಕ್ರೀಡಾ ಗಣ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ಆಕ್ಲೆಂಡ್‌ನಲ್ಲಿ ಆಯೋಜಿಸಲಾಗಿರುವ ಬೃಹತ್ ಸಮಾವೇಶದಲ್ಲಿ ಅನಿವಾಸಿ ಭಾರತೀಯರನ್ನು (ಭಾರತೀಯ ಡಯಾಸ್ಪೊರಾ) ಉದ್ದೇಶಿಸಿ ಅವರು ಮಾತನಾಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.