
ಕಲಬುರಗಿ,ಜು.11-ಉತ್ತರ ಕರ್ನಾಟಕದ ಪ್ರಮುಖ ಮತ್ತು ಅತಿ ದೊಡ್ಡ ಜಿಲ್ಲೆಯಾದ ಕಲಬುರಗಿ ಜಿಲ್ಲೆಯ ವಿಶ್ವಕರ್ಮ ಜನಾಂಗದವರಿಗೆ ಜಿಲ್ಲಾ ಕೇಂದ್ರದಲ್ಲಿ ಸಮುದಾಯದ ಸಾಂಸ್ಕøತಿಕ ಚಟುವಟಿಕೆಗಳ ಆಯೋಜನೆ ಮತ್ತು ಸಮುದಾಯ ಭವನ ನಿರ್ಮಾಣಕ್ಕಾಗಿ ಈ ಜನಾಂಗಕ್ಕೆ ಸಾಮಾಜಿಕ ನ್ಯಾಯದಡಿ ನಾಗರಿಕ ಸೌಲಭ್ಯ ನಿವೇಶನ ಒಂದನ್ನು ಮಂಜೂರು ಮಾಡಿದ್ದಕ್ಕಾಗಿ ಕರ್ನಾಟಕ ವಿಶ್ವಕರ್ಮ ಮಹಾ ಒಕ್ಕೂಟ ಹಾಗೂ ಕಲಬುರಗಿ ಜಿಲ್ಲಾ ವಿಶ್ವಕರ್ಮ ಸಮಾಜ ಸಂಘಟನೆಗಳು ಸರ್ಕಾರಕ್ಕೆ ಅಭಿನಂದನ ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿವೆ.
ಕರ್ನಾಟಕ ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ್ ಪತ್ತಾರ ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಮತ್ತು ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.
“ಕಲಬುರಗಿಯಲ್ಲಿ ವಿಶ್ವಕರ್ಮ ಸಮಾಜಕ್ಕೆ ಸರ್ಕಾರ ಮಂಜೂರು ಮಾಡಿರುವ ನಿವೇಶನವು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡ ಕೋಟನೂರ-ಡಿ ಗ್ರಾಮದ ಸರ್ವೇ ನಂಬರ್ 61/*/4 ರಲ್ಲಿದ್ದು, 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಇದ್ದು, 1344. 22 ಚ. ಮೀ.ವಿಸ್ತೀರ್ಣ ಹೊಂದಿದೆ. ಈ ನಿವೇಶನಕ್ಕೆ ಹಂಚಿಕೆ ಮೌಲ್ಯದ ಶೇಕಡ 10 ರಷ್ಟು ದರವನ್ನು ನಿಗದಿಪಡಿಸಲಾಗಿದ್ದು, ನಿವೇಶನ ಹಂಚಿಕೆ ಆದೇಶಕ್ಕೆ ರಾಜ್ಯ ಸಚಿವ ಸಂಪುಟ ಜೂನ್ 20ರಂದು ಅನುಮೋದನೆ ನೀಡಿದೆ. “ಕಳೆದ ಎಂಟು ತಿಂಗಳ ಹಿಂದೆ ಕಲಬುರ್ಗಿಯಲ್ಲಿ ಜರುಗಿದ ರಾಜ್ಯ ವಿಶ್ವಕರ್ಮ ಮಹಾ ಒಕ್ಕೂಟದ ನೂತನ ಕಲಬುರ್ಗಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಂದರ್ಭದಲ್ಲಿ ರಾಜ್ಯ ಒಕ್ಕೂಟ ಮತ್ತು ಕಲಬುರ್ಗಿ ಜಿಲ್ಲಾ ವಿಶ್ವಕರ್ಮ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಕಲಬುರ್ಗಿ ವಿಶ್ವಕರ್ಮ ಸಮಾಜದ ವತಿಯಿಂದ ಉಚಿತ ನಿವೇಶನಕ್ಕಾಗಿ ಅಂದಿನ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹಾಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಭೈರತಿ ಸುರೇಶ ಅವರಿಗೆ ಜಂಟಿಯಾಗಿ ಮನವಿ ಪತ್ರ ಸಲ್ಲಿಸಲಾಗಿತ್ತು. ಸಮಾಜದ ಈ ಬೇಡಿಕೆಯನ್ನನುಲಕ್ಷಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮುತುವರ್ಜಿ ವಹಿಸಿ ವಿಶ್ವಕರ್ಮ ಸಮಾಜಕ್ಕೆ ಕಲಬುರ್ಗಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಿವೇಶನ ಮೌಲ್ಯದ ಮೊತ್ತ ಅಂದರೆ -1.4 ಕೋಟಿ ರೂ ಮೌಲ್ಯದ ನಿವೇಶನವನ್ನು ಮಂಜೂರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಮಾಜಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರಿಗೆ ಮತ್ತು ಸರ್ಕಾರಕ್ಕೆ ಕಲಬುರ್ಗಿ ಜಿಲ್ಲೆ ವಿಶ್ವಕರ್ಮ ಸಮಾಜದ ಪರವಾಗಿ ಅಭಿನಂದನ ಪರ ಧನ್ಯವಾದಗಳನ್ನು ಸಲ್ಲಿಸುತ್ತೇನೆ”ಎಂದರು .
ರಾಜ್ಯದ ಹಿಂದುಳಿದ ವರ್ಗಗಳಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತಿ ಹೆಚ್ಚು ಹಿಂದುಳಿದಿರುವ ಈ ಸಮಾಜಕ್ಕೆ ಎಲ್ಲ ರಂಗಗಳಲ್ಲೂ ಸಾಮಾಜಿಕ ನ್ಯಾಯದಡಿ ಸರ್ಕಾರದಿಂದ ಹೆಚ್ಚಿನ ಒತ್ತಾಸೆ ಸಿಗಬೇಕಾಗಿದೆ. ಕಳೆದ ಎರಡು ವರ್ಷಗಳ ಹಿಂದಷ್ಟೇ ರಾಜ್ಯದಲ್ಲಿ ಪಕ್ಷಾತೀತ ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿಶ್ವಕರ್ಮ ಮಹಾ ಒಕ್ಕೂಟದ ಬೇಡಿಕೆಗಳಿಗೆ ಸದ್ಯದ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ಸಮಾಧಾನ ತಂದಿದೆ. ಕಲಬುರ್ಗಿಯಂತೆ ಅನ್ಯ ಜಿಲ್ಲೆಗಳಲ್ಲೂ ವಿಶ್ವಕರ್ಮ ಸಮಾಜಕ್ಕೆ ಸಮುದಾಯ ಭವನ ಮತ್ತು ವಿದ್ಯಾರ್ಥಿಗಳಿಗೆ ಹಾಸ್ಟೆಲ್‍ನಂತಹ ಸೌಲಭ್ಯಗಳ ಅಗತ್ಯವಿದೆ .ಈ ಸಂಬಂಧದಲ್ಲಿ ಇಷ್ಟರಲ್ಲೇ ಸರ್ಕಾರಕ್ಕೆ ಈ ಸಮಾಜದ ಸಮಗ್ರ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಗುವುದು”ಎಂದು ಪತ್ತಾರ ಈ ಸಂದರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಿಶ್ವಕರ್ಮ ನೌಕರರ ವಿವಿಧೋದ್ದೇಶ ಸರಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಪತ್ತಾರ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರು ಉಪಸ್ಥಿತರಿದ್ದರು.































