
ಕಲಬುರಗಿ : ಕಲಬುರಗಿ ನಗರದ ವಾರ್ಡ್ ಸಂಖ್ಯೆ 54ರ ತಾರಫೈಲ್ ಬಡಾವಣೆಯಲ್ಲಿ 450 ಫಲಾನುಭವಿಗಳಿಗೆ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾಮಗಾರಿ ಆರು ವರ್ಷ ಕಳೆದರೂ ಪೂರ್ಣಗೊಳ್ಳದಿರುವುದನ್ನು ಖಂಡಿಸಿ ಜೈ ಕನ್ನಡಿಗರ ಸೇನೆ ಕಲಬುರಗಿ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.
ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ದತ್ತು ಹೆಚ್. ಭಾಸಗಿ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಫಲಾನುಭವಿಗಳಿಗೆ ಮನೆಗಳು ಮಂಜೂರಾಗಿ ಹಲವು ವರ್ಷಗಳಾದರೂ ಒಂದೇ ಒಂದು ಮನೆ ಪೂರ್ಣಗೊಂಡಿಲ್ಲ ಅಲ್ಲದೇ ಕಳಪೆ ಮಟ್ಟದ ಕಾಮಗಾರಿ ನಡೆಸಲಾಗಿದ್ದು, ಹೆಚ್ಚಿನ ಹಣ ನೀಡಿದವರ ಮನೆಗಳಿಗೆ ಮಾತ್ರ ಆದ್ಯತೆ ನೀಡಿ ಉಳಿದ ಫಲಾನುಭವಿಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ.
ಇದಲ್ಲದೆ, 450 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ ಎಂದು ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಬಡ ಕುಟುಂಬಗಳು ಇನ್ನೂ ಬಾಡಿಗೆ ಮನೆಗಳಲ್ಲೇ ಜೀವನ ಸಾಗಿಸುವಂತಾಗಿದ್ದು, ಸ್ವಂತ ಮನೆಯ ಕನಸು ನನಸಾಗದೆ ಸಂಕಷ್ಟ ಎದುರಿಸುತ್ತಿವೆ. ಫಲಾನುಭವಿಗಳಿಂದ ತಲಾ ?35 ಸಾವಿರ ಡಿಡಿ ಪಡೆದಿದ್ದರೂ ಮನೆಗಳನ್ನು ಪೂರ್ಣಗೊಳಿಸದಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಈ ಕಾಮಗಾರಿಯ ಬಗ್ಗೆ ಅಗತ್ಯ ಮುತುವರ್ಜಿ ವಹಿಸದೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿರುವ ಜೈ ಕನ್ನಡಿಗರ ಸೇನೆ, ಸ್ಥಗಿತಗೊಂಡಿರುವ ಮನೆಗಳ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಹಾಗೂ ನಿರ್ಲಕ್ಷ್ಯ ವಹಿಸಿದ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಫಲಾನುಭವಿಗಳೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಡಾ. ದತ್ತು ಹೆಚ್. ಭಾಸಗಿ ಅವರು ತಮ್ಮ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.































