Home ಮುಖಪುಟ ಸುದ್ದಿ ಯುವಕನಿಂದ ಪತ್ನಿ, ಮಕ್ಕಳು ಸೇರಿ ೬ಜನರ ಭೀಕರ ಹತ್ಯೆ

ಯುವಕನಿಂದ ಪತ್ನಿ, ಮಕ್ಕಳು ಸೇರಿ ೬ಜನರ ಭೀಕರ ಹತ್ಯೆ

ಹೈದರಾಬಾದ್,ಜು.೧೧-ತನ್ನ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣದಿಂದ ರೊಚ್ಚಿಗೆದ್ದ ಯುವಕನೊಬ್ಬ, ತನ್ನ ಪತ್ನಿ, ಇಬ್ಬರು ಪುಟ್ಟ ಮಕ್ಕಳು ಹಾಗೂ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತ ಸಂತ್ರಸ್ತೆ ಸೇರಿದಂತೆ ಒಂದೇ ಕುಟುಂಬದ ಮೂವರನ್ನು ಅತ್ಯಂತ ಕ್ರೂರವಾಗಿ ಕತ್ತಿ ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ನಡೆದಿದೆ.


ಶುಕ್ರವಾರ ಮತ್ತು ಶನಿವಾರದ ಮಧ್ಯರಾತ್ರಿ ಈ ಭೀಕರ ನರಮೇಧ ನಡೆದಿದ್ದು, ಹಂತಕನನ್ನು ೨೮ ವರ್ಷದ ರಾಜ್‌ಕುಮಾರ್ ಎಂದು ಗುರುತಿಸಲಾಗಿದೆ. ಆರು ಜನರನ್ನು ಬಲಿ ಪಡೆದ ಬಳಿಕ ಆರೋಪಿಯು ತಲೆಮರೆಸಿಕೊಂಡಿದ್ದಾನೆ.


ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ರಾಜ್‌ಕುಮಾರ್ ಮೊದಲಿಗೆ ತನ್ನ ಮನೆಯಲ್ಲೇ ಪತ್ನಿ ಪಾರ್ವತಿ ಸರಿತಾ (೩೦), ಮೂರು ವರ್ಷದ ಮಗ ಪರೀಕ್ಷಿತ್ ಹಾಗೂ ಎರಡು ವರ್ಷದ ಮಗ ದೈವಿಕ್ಷಿತ್ ಎಂಬುವವರನ್ನು ಕತ್ತಿಯಿಂದ ಇರಿದು ಭೀಕರವಾಗಿ ಕೊಂದಿದ್ದಾನೆ.

ತನ್ನ ಕುಟುಂಬವನ್ನು ಮುಗಿಸಿದ ಹಂತಕ, ಅಲ್ಲಿಂದ ನೇರವಾಗಿ ಮೇ ತಿಂಗಳಲ್ಲಿ ತನ್ನ ವಿರುದ್ಧ ಪೋಕ್ಸೊ ದೂರು ದಾಖಲಿಸಿದ್ದ ೧೭ ವರ್ಷದ ಅಪ್ರಾಪ್ತ ಬಾಲಕಿಯ ಮನೆಗೆ ನುಗ್ಗಿದ್ದಾನೆ. ಅಲ್ಲಿ ಬಾಲಕಿಯ ತಾಯಿ ಚಿಟ್ಯಾಲ ಲಕ್ಷ್ಮಿ (೪೫) ಹಾಗೂ ಅಜ್ಜಿ ಚಿಟ್ಯಾಲ ರುಕ್ಕಮ್ಮ (೬೫) ಅವರನ್ನೂ ಸಹ ಹತ್ಯೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಕಾಮುಕ, ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಗ್ರಾಮದ ಹೊರವಲಯದಲ್ಲಿದ್ದ ಕೆರೆಯ ಬಳಿ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಮತ್ತೆ ಅತ್ಯಾಚಾರ ಎಸಗಿದ್ದಾನೆ. ತದನಂತರ ಆಕೆಯನ್ನೂ ಸಹ ಕ್ರೂರವಾಗಿ ಕೊಲೆ ಮಾಡಿ ಸಾಕ್ಷಿ ನಾಶಪಡಿಸಲು ಯತ್ನಿಸಿದ್ದಾನೆ.

ಜಾಮೀನಿನ ಮೇಲೆ ಹೊರಬಂದಿದ್ದ ಕ್ರೂರಿ


ಕಳೆದ ಮೇ ತಿಂಗಳಲ್ಲಿ ಈ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಈತ ಜೂನ್ ತಿಂಗಳಲ್ಲಿ ಸ್ಥಳೀಯ ನ್ಯಾಯಾಲಯದಿಂದ ಮುಂಗಡ ಜಾಮೀನು ಪಡೆದುಕೊಂಡಿದ್ದ. ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆಯಿರುವ ಪ್ರಕರಣ ಇದಾಗಿದ್ದರಿಂದ ನ್ಯಾಯಾಲಯದ ಆದೇಶದಂತೆ ಪೊಲೀಸರು ಆತನನ್ನು ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಿದ್ದರು. ಜಾಮೀನಿನ ಮೇಲೆ ಹೊರಬಂದ ಬೆನ್ನಲ್ಲೇ ಈ ಭೀಕರ ದ್ವೇಷದ ಕೃತ್ಯ ಎಸಗಿದ್ದಾನೆ.

ಕೊಲೆಗಡುಕ ರಾಜ್‌ಕುಮಾರ್ ಈ ಆರೂ ಹತ್ಯೆಗಳನ್ನು ಮಾಡಿದ ನಂತರ ತನ್ನ ಕುಟುಂಬದ ಸದಸ್ಯರಿಗೆ ಫೋನ್ ಮಾಡಿದ್ದಾನೆ. “ನಾನು ಆರು ಜನರನ್ನು ಕೊಲೆ ಮಾಡಿದ್ದೇನೆ, ಈಗ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಸದ್ಯ ಆತನ ಸುಳಿವು ಪತ್ತೆಯಾಗಿಲ್ಲ.

ಸ್ಥಳಕ್ಕೆ ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಭೇಟಿ ನೀಡಿ ಸಾಕ್ಷ್ಯಗಳನ್ನು ಕಲೆಹಾಕಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ತೀವ್ರ ಶೋಧ ಕಾರ್ಯ ಮುಂದುವರಿದಿದೆ ಎಂದು ಫ್ಯೂಚರ್ ಸಿಟಿ ಕಮಿಷನರ್ ತರುಣ್ ಜೋಶಿ ತಿಳಿಸಿದ್ದಾರೆ.