Home ಜಿಲ್ಲೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ

ಧಾರವಾಡ, ಜೂ.೧೩: ಪ್ರಸ್ತುತ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದ್ದಾರೆ.


ಈ ಕುರಿತು ಪ್ರಕಟಣೆ ನೀಡಿರುವ ಅವರು, ಗ್ರಾಮೀಣ ಪ್ರದೇಶದಲ್ಲಿ ಪ್ರಸ್ತುತ ೨೧ ಗ್ರಾಮಗಳಲ್ಲಿ ೨೫ ಖಾಸಗಿ ಕೊಳವೆಬಾವಿ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಯಾವುದೇ ಟ್ಯಾಂಕರ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕುಗಳಲ್ಲಿ ಮಲಪ್ರಭ ಜಲಾಶಯದಿಂದ ಕಾಲುವೆಗಳ ಮುಖಾಂತರ ೬೦ ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದ್ದು, ಸದರಿ ತಾಲ್ಲೂಕಿನಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.


ನಗರ ಸ್ಥಳೀಯ ಸಂಸ್ಥೆಗಳಲ್ಲಿ ಧಾರವಾಡ ಜಿಲ್ಲೆಯ ೦೫ ಸ್ಥಳೀಯ ಸಂಸ್ಥೆಗಳಲ್ಲಿರುವ ೧೦೦ ವಾರ್ಡುಗಳಿದ್ದು ಯಾವುದೇ ವಾರ್ಡುಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದಿಲ್ಲ. ೮೦ ವಾರ್ಡುಗಳಲ್ಲಿ ಪ್ರತಿ ದಿನ ನೀರು ಪೊರೈಕೆ ಮಾಡಲಾಗುತ್ತಿದ್ದು, ಉಳಿದ ೨೦ ವಾರ್ಡುಗಳಲ್ಲಿ ೨ ರಿಂದ ೩ ದಿನಗಳವರೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ೦೫ ಸ್ಥಳೀಯ ಸಂಸ್ಥೆಗಳಲ್ಲಿನ ಕೆರೆಗಳಲ್ಲಿ ಕುಡಿಯುವ ನೀರಿನ ಶೇಖರಣೆ ಇರುವುದರಿಂದ ಪ್ರಸ್ತುತ ಬೇಸಿಗೆ ಅವಧಿಯಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.


ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದ ವ್ಯಾಪ್ತಿಯಲ್ಲಿ ೮೨ ವಾರ್ಡುಗಳಿದ್ದು ಅದರಲ್ಲಿ ೧೩ ವಾರ್ಡುಗಳಲ್ಲಿ ೨೪ಘಿ೭ ನೀರು ಪೊರೈಕೆ ಮಾಡಲಾಗುತ್ತಿದ್ದು, ಉಳಿದ ವಾರ್ಡುಗಳಲ್ಲಿ ೨ ರಿಂದ ೭ ದಿನಗಳವರೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಪ್ರಸ್ತುತ ೫೩ ನೀರು ಪೂರೈಕೆ ಟ್ಯಾಂಕರ್‌ಗಳು ಲಭ್ಯವಿದ್ದು, ಮುಂಜಾಗ್ರತೆ ಕ್ರಮವಾಗಿ ಬೇಸಿಗೆಯಲ್ಲಿ ತೊಂದರೆಯಾಗದAತೆ ಹೆಚ್ಚುವರಿ ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗುವುದು. ಕುಡಿಯುವ ನೀರಿನ ಸರಬರಾಜು ಕುಂದು ಕೊರತೆಗಾಗಿ ಸಾರ್ವಜನಿಕರ ಸಹಾಯಕ್ಕಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರದ ವ್ಯಾಪ್ತಿಯ ಸಹಾಯವಾಣಿ ಸಂಖ್ಯೆ: ೭೯೯೬೬೬೬೨೪೭ ಹಾಗೂ ಜಿಲ್ಲಾ ಪಂಚಾಯತ್ ಸಹಾವಾಣಿ: ೦೮೩೬-೨೭೪೨೨೧ ಮತ್ತು ಜಿಲ್ಲಾಧಿಕಾರಿಗಳ ಕಛೇರಿ ಸಹಾಯವಾಣಿ ಸಂಖ್ಯೆ: ೦೮೩೬-೨೪೪೫೫೦೮ ಅಥವಾ ೧೦೭೭ ಗಳಿಗೆ ಕರೆ ಮಾಡಬಹುದು ಎಂದು ಹೇಳಿದ್ದಾರೆ.


ಮೇವಿನ ಲಭ್ಯತೆ: ಧಾರವಾಡ ಜಿಲ್ಲೆಯಲ್ಲಿ ೨,೩೩,೪೬೪ ಜಾನುವಾರುಗಳಿದ್ದು, ೪೬೫೦೭೬.೮೧ ಟನ್‌ಗಳಷ್ಟು ಮೇವಿನ ಪ್ರಮಾಣವಿದ್ದು ೪೫ ವಾರಗಳಷ್ಟು ಜಾನುವಾರುಗಳಿಗೆ ಮೇವು ಲಭ್ಯತೆವಿರುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಯಾವುದೇ ತಾಲ್ಲೂಕುಗಳಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.


೨೦೨೬ ನೇ ಮುಂಗಾರು ಹಂಗಾಮಿನಲ್ಲಿ ೧ನೇ ಜೂನನಿಂದ ೧೧ ನೇ ಜೂನವರೆಗೆ ವಾಡಿಕೆ ಮಳೆ ೪೦.೬ ಮೀ.ಮೀ ಆಗಬೇಕಾಗಿದ್ದು ವಾಸ್ತವಿಕ ೬೬.೪ ಮೀ.ಮೀ ಮಳೆಯಾಗಿದ್ದು ಶೇ.೬೪ ರಷ್ಟು ಹೆಚ್ಚಾಗಿರುತ್ತದೆ. ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ ಪೂರ್ವ ಮುಂಗಾರು ಹಂಗಾಮಿನಲ್ಲಿ ಗುಡುಗು ಸಿಡಿಲಿನಿಂದ ಧಾರವಾಡ ತಾಲ್ಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದು ಸದರಿ ವರಸುದಾರರಿಗೆ ರೂ.೫ ಲಕ್ಷಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ೧೨ ದೊಡ್ಡ ಜಾನುವಾರು ೭೦ ಸಣ್ಣ ಜಾನುವಾರುಗಳು ಮೃತಪಟ್ಟಿದ್ದು ಸದರಿ ಜಾನುವಾರು ಮಾಲಿಕರಿಗೆ ಒಟ್ಟು ರೂ. ೬.೬೦ ಲಕ್ಷಗಳನ್ನು ಜಿಲ್ಲಾಡಳಿತದಿಂದ ಪರಿಹಾರವನ್ನು ವಿತರಿಸಲಾಗಿದೆ.


ಜಿಲ್ಲೆಯಲ್ಲಿ ನವಲಗುಂದ ತಾಲ್ಲೂಕಿನಲ್ಲಿ ೦೧ ಪೂರ್ಣ ಪ್ರಮಾಣದ ಮನೆಯಾಗಿದ್ದು ಸರ್ಕಾರದ ಎನ್.ಡಿ.ಆರ್.ಎಫ್ ಮಾರ್ಗ ಸೂಚಿಯಂತೆ ರೂ.೧.೨೦ ಲಕ್ಷಗಳನ್ನು ಹಾಗೂ ಹುಬ್ಬಳ್ಳಿ ತಾಲ್ಲೂಕಿನಲ್ಲಿ ೦೧, ಕಲಘಟಗಿ ತಾಲ್ಲೂಕಿನಲ್ಲಿ ೦೨ ಮತ್ತು ಹುಬ್ಬಳ್ಳಿ ನಗರದಲ್ಲಿ ೦೩ ಮನೆಗಳು ಭಾಗಶಃ ಹಾನಿಯಾಗಿದ್ದು, ಪ್ರತಿ ಹಾನಿಯಾದ ಅರ್ಹ ಮನೆಗಳಿಗೆ ರೂ.೬,೫೦೦ ರಂತೆ ಒಟ್ಟು ರೂ.೩೯.೦೦ ಸಾವಿರಗಳ ಪರಿಹಾರವನ್ನು ವಿತರಿಸಲಾಗಿದೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.