
ಸೇಡಂ, ಜೂ,೦೬: ಪರಿಸರ ಸಂರಕ್ಷಣೆ ಎಂಬುದು ಕೇವಲ ಸರ್ಕಾರ ಅಥವಾ ಕೆಲವು ಸಂಸ್ಥೆಗಳ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಗೆ ನಾವು ಕೊಡಬಹುದಾದ ಅತ್ಯಂತ ಅಮೂಲ್ಯವಾದ ಉಡುಗೊರೆ ಅದು ಶುದ್ಧವಾದ ಗಾಳಿ,ನೀರು ಮತ್ತು ಹಸಿರು ಪರಿಸರ ಮಾತ್ರ ಎಂದು ಶ್ರೀಸಿಮೆಂಟ್ ಕಂಪನಿಯ ಸಿಎಸ್ ಆರ್ ವಿಭಾಗದ ಮುಖ್ಯಸ್ಥರಾದ ರಾಮನಗೌಡ ಹೇಳಿದರು.ತಾಲೂಕಿನ ಕೋಡ್ಲಾ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಫೌಂಡೇಶನ್ ಟ್ರಸ್ಟ್ ಹಾಗೂ ಶ್ರೀ ಅಬ್ದುಲ್ ಕಲಾಂ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳೊಂದಿಗೆ ಗಿಡ ನೆಟ್ಟು ಮಾತನಾಡಿದ ಅವರು ಗಿಡ ನೆಡುವುದು ಮಾತ್ರವಲ್ಲ, ಪೋಷಿಸಬೇಕು ಏಕೆಂದರೆ ಕೇವಲ ಸಾಂಕೇತಿಕವಾಗಿ ಗಿಡಗಳನ್ನು ನೆಟ್ಟು ಫೋಟೋ ತೆಗೆಸಿಕೊಳ್ಳುವ ಸಂಸ್ಕೃತಿ ಬದಲಾಗಬೇಕು.ನೆಟ್ಟ ಪ್ರತಿಯೊಂದು ಸಸಿಯನ್ನೂ ಹೆತ್ತ ಮಗುವಿನಂತೆ ಪೋಷಿಸಿ ಮರವಾಗಿಸುವ ಜವಾಬ್ದಾರಿಯನ್ನು ಸಾರ್ವಜನಿಕರು ಹೊರಬೇಕು ಎಂದರು.ಶ್ರೀ ಫೌಂಡೇಶನ್ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳು ಹಾಗೂ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.ಅನಿಲ್ ಬಾಬುರಾವ್ ಅವರು ಸಂಸ್ಥೆಯ ವಿವಿಧ ಸಾಮಾಜಿಕ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.ಶಾಲೆಯ ಮುಖ್ಯಗುರುಗಳಾದ ಶಿವರಾಯ ಭೋವಿ ಅವರು ಶಾಲೆಯ ಅಭಿವೃದ್ಧಿಗೆ ಶ್ರೀ ಸಿಮೆಂಟ್ ಸಂಸ್ಥೆ ನೀಡುತ್ತಿರುವ ನಿರಂತರ ಸಹಕಾರವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ವಿನಂತಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಎಸ್ ಡಿಎಂಸಿ ಅಧ್ಯಕ್ಷರು ವಹಿಸಿದ್ದರು. ಗ್ರಾಮದ ಮುಖಂಡರಾದ ಅನಿಲ್ ರೆಡ್ಡಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ, ಶಾಲೆಯಲ್ಲಿ ಯಶಸ್ವಿಯಾಗಿ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಕಾರಣರಾದ ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷರಾದ ರಾಜು ಅವರು ಕಾರ್ಯಕ್ರಮದ ರೂವಾರಿಯಾಗಿ ಕಾರ್ಯನಿರ್ವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಸಿಮೆಂಟ್ ಕಂಪನಿಯ ಯೂನಿಯನ್ ಅಧ್ಯಕ್ಷರಾದ ಶ್ರೀ ಬಸವರೆಡ್ಡಿ, ಯೂನಿಯನ್ ಪದಾಧಿಕಾರಿಗಳು, ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ದೇವದಾಸ್ ರೆಡ್ಡಿ ಅವರು ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು





























