Home ಜಿಲ್ಲೆ ಬೆಂಗಳೂರು ರಸ್ತೆ ಅಭಿವೃದ್ಧಿಗೆ ಶಾಸಕರಿಂದ ೮೦ ಲಕ್ಷ ಅನುದಾನ

ರಸ್ತೆ ಅಭಿವೃದ್ಧಿಗೆ ಶಾಸಕರಿಂದ ೮೦ ಲಕ್ಷ ಅನುದಾನ

ಕೋಲಾರ,ಜು.೧೬- ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಜಿ. ಮಂಜುನಾಥ್ ತಮ್ಮ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ನಗರದ ಪ್ರಮುಖ ರಸ್ತೆಗಳ ಡಾಂಬರೀಕರಣ ಹಾಗೂ ದುರಸ್ತಿ ಕಾಮಗಾರಿಗಳಿಗೆ ೮೦ ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ.


ನಗರದ ಪ್ರಮುಖ ಸಂಪರ್ಕ ರಸ್ತೆಗಳಾದ ಡೂಮ್ ಲೈಟ್ ವೃತ್ತದಿಂದ ಕೆ.ಇ.ಬಿ. ಕಚೇರಿವರೆಗೆ ಹಾಗೂ ಡೂಮ್ ಲೈಟ್ ವೃತ್ತದಿಂದ ಕೆನರಾ ಬ್ಯಾಂಕ್ ರಸ್ತೆಯವರೆಗೆ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಸ್ಥಳೀಯ ಕಾಂಗ್ರೆಸ್ ಮುಖಂಡರು ಶಾಸಕರ ಗಮನಕ್ಕೆ ತಂದಿದ್ದರು.


ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕರು ತಮ್ಮ ವಿಶೇಷ ಅನುದಾನದಿಂದ ೮೦ ಲಕ್ಷ ಬಿಡುಗಡೆಗೊಳಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ ನೀಡಿದ್ದಾರೆ.


ಬುಧವಾರ ಡೂಮ್ ಲೈಟ್ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾಮಗಾರಿಗೆ ಪ್ರಾಥಮಿಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಮುಖಂಡರು ಸಾರ್ವಜನಿಕರ ಅನುಕೂಲಕ್ಕಾಗಿ ಕಾಮಗಾರಿಯನ್ನು ತಕ್ಷಣ ಆರಂಭಿಸಲಾಗಿದ್ದು, ಇನ್ನೂ ಮೂರು ದಿನಗಳಲ್ಲಿ ಶಾಸಕ ಕೊತ್ತೂರು ಜಿ. ಮಂಜುನಾಥ್ ನೇತೃತ್ವದಲ್ಲಿ ಅಧಿಕೃತವಾಗಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.


ನಗರದ ರಸ್ತೆ ಅಭಿವೃದ್ಧಿಗೆ ತ್ವರಿತವಾಗಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿರುವ ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರ ಕಾರ್ಯವನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯರಾದ ಸೈಯದ್ ಆಫ್ಸರ್, ಮಂಜುನಾಥ್, ಅಮರ್, ಕೀಲುಕೋಟೆ ಕಾಶಿ, ಗಂಗಮ್ಮನಪಾಳ್ಯ ರಾಮಯ್ಯ, ಕಾಂಗ್ರೆಸ್ ಮುಖಂಡರಾದ ಕಠಾರಿಪಾಳ್ಯ ಗಂಗಣ್ಣ, ಅಮರನಾಥ, ಗೋವಿಂದರಾಜ ಮುದ್ದಪ್ಪ, ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಬಾಲು, ಲಕ್ಷ್ಮೀಸಾಗರ ಸುನಿಲ್ ಕುಮಾರ್ ಭರತ್, ಲೋಕೇಶ್, ಮಾಕೊಂಡಪ್ಪ ಸೇರಿದಂತೆ ಹಲವಾರು ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.