ಚಿತ್ತಾಪುರ; ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಸಂಘಮೇಶ್ವರ ಅವರು ಭೇಟಿ ನೀಡಿ ಪರಿಶಿಲನೆ ನಡೆಸಿದರು.
ನಂತರ ವಸತಿ ಶಾಲೆಯ ಅಡುಗೆ ಕೋಣೆ, ಶೌಚಾಲಯ, ಆಹಾರ ಸಂಗ್ರಹಣೆ ಕೇಂದ್ರ, ಕ್ಲಾಸ್ ಕೋಣೆ, ಆಡಳಿತ ಕೇಂದ್ರ, ಗಾರ್ಡನ್, ಕುಡಿಯುವ ನೀರಿನ ಘಟಕ, ಸ್ವಚ್ಛತೆ ಸೇರಿದಂತೆ ಇತರೆ ಕಡೆಗಡೆಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೆಳೆ ವಿದ್ಯಾರ್ಥಿಗಳು, ಪಾಲಕರು ಹಾಗೂ ವಸತಿ ನಿಲಯದ ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿದರು.
ಊಟ ಸರಿಯಾಗಿ ಮಾಡದ ಕಾರಣ 50 ಮಕ್ಕಳು ಅಸ್ವಸ್ಥರಾಗಿ ಅನಾರೋಗ್ಯದಿಂದ ಬಳಲುತ್ತಿದ್ದು, ಅದರಲ್ಲಿ 39 ವಿದ್ಯಾರ್ಥಿಗಳಿಗೆ ವಾಂತಿ, ಭೇದಿ ಉಂಟಾಗಿದೆ. ಅವರನ್ನು ಕೂಡಲೇ ಗುಂಡಗುರ್ತಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ 10 ವಿದ್ಯಾರ್ಥಿಗಳು, ಚಿತ್ತಾಪುರ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ 34, ದಂಡೋತಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ 1, ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ 5 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಭಾರಿ ಪ್ರಾಂಶುಪಾಲೆ ಹಾಗೂ ನಿಲಯ ಪಾಲಕರನ್ನು ಅಮಾನತುಗೊಳಿಸಲು ಮೇಲಾಧಿಕಾರಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಪಂ ಇಓ ಅಕ್ರಂ ಪಾಶಾ, ತಾಲೂಕು ಅಲ್ಪಸಂಖ್ಯಾತರ ವಿಸ್ತಾರಣಾ ಅಧಿಕಾರಿ ಶೇಖ ಫೈಯಿಮೋದ್ದಿನ್ ಇದ್ದರು.
…………
ಚಿತ್ತಾಪುರ ತಾಲೂಕಿನ ದಂಡೋತಿಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಊಟ ಸೇವಿಸಿದ ನಂತರ ಮಕ್ಕಳು ಅಸ್ವಸ್ಥರಾದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ಮಾತನಾಡಿ ಮಾಹಿತಿ ಪಡೆಯಲಾಗಿದೆ ಎಂದು ಗೃಹ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದರು.
ಈ ಕುರಿತು ಟ್ವಿಟ್ ಮೂಲಕ ಮಾಹಿತಿ ಹಂಚಿಕೊಂಡ ಅವರು,
ಪ್ರಾಥಮಿಕ ಮಾಹಿತಿಯ ಪ್ರಕಾರ ರಾತ್ರಿ ತಯಾರಿಸಿದ ಅನ್ನವು ಪೂರ್ಣವಾಗಿ ಬೆಂದಿರದ ಕಾರಣ, ಊಟ ಮಾಡಿದ ಮಕ್ಕಳಲ್ಲಿ ಅಜೀರ್ಣದ ಸಮಸ್ಯೆ ಉಂಟಾಗಿರುವುದಾಗಿ ತಿಳಿದುಬಂದಿದೆ, ಈ ಬಗ್ಗೆ ಹೆಚ್ಚಿನ ಮಾಹಿತಿಯ ವರದಿ ಬಂದ ನಂತರ ನಿರ್ಲಕ್ಷ್ಯ ವಹಿಸಿದವರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ಹಾಸ್ಟೆಲ್’ಗಳ ಆಹಾರ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಗಂಭೀರವಾಗಿ ಪರಿಗಣಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ವಿದ್ಯಾರ್ಥಿಗಳ ವಿಷಯದಲ್ಲಿ ಯಾವುದೇ ಲೋಪಗಳು ಆಗದಂತೆ ನೋಡಿಕೊಳ್ಳುವುದು ಆದ್ಯತೆಯಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದರು.
…………….
ರಾತ್ರಿ ವೆಳೆಯಲ್ಲಿ ನಮ್ಮ ಇಬ್ಬರು ಮಕ್ಕಳಿಗೆ ಹೊಟ್ಟೆ ನೋವಾಗಿರುವ ಕಾರಣ ಆಸ್ಪತ್ರೆಗೆ ಕರೆಕೊಂಡು ಹೋಗಿ ಚಿಕಿತ್ಸೆ ನೀಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ನೋಡಿ ನನಗೆ ಗೊತ್ತಾಗಿದೆ. ಕೂಡಲೇ ಏನಾಗಿದೆ ಎಂದು ಪ್ರಾಂಶುಪಾಲರನ್ನು ಹಾಗೂ ವಾರ್ಡ್’ನ್ ಅವರನ್ನು ಕರೆ ಮಾಡಿ ಕೇಳಲು ಸಂಪರ್ಕಿಸಿದರೇ ಅವರು ನನ್ನ ಕರೆ ಸ್ವಿಕರಿಸಿಲ್ಲ. ಇದರಿಂದ ಭಯಭೀತಳಾಗಿ ನಾನು ಖುದ್ದಾಗಿ ಹಾಸ್ಟಲ್’ಗೆ ಭೇಟಿ ನೀಡಿದ ಮೇಲೆ ಏನಾಗಿದೆ ಎನ್ನುವುದರ ಸಂಪೂರ್ಣ ಮಾಹಿತಿ ಸಿಕ್ಕಿದೆ. ಒಂದು ವೆಳೆ ನಮ್ಮ ಮಕ್ಕಳು ಸತ್ತರು ಕೂಡ ಇವರು ಮಾಹಿತಿ ನೀಡಲ್ಲ ಎನ್ನುವುದು ನನಗೆ ಇದೀಗ ಅರ್ಥವಾಗಿದೆ. ಇಲ್ಲಿ ನೀರಿನ ಸಮಸ್ಯೆ ಇದೆ ಬಗೆಹರಿಸಿ ಎಂದು ನಾನೇ ಖುದ್ದಾಗಿ ಹೇಳಿ ಹೋದರು ಯಾವುದೇ ಪ್ರಯೋಜನವಾಗಿಲ್ಲ. ಮುಂದೇ ಇಲ್ಲಿ ನಮ್ಮ ಮಕ್ಕಳನ್ನು ಓದಿಸಬೇಕೋ ಅಥವಾ ಬೇಡವೋ ಎಂದು ಭಯದ ವಾತಾವರಣದಲ್ಲಿ ಇದ್ದೇನೆ.
-ಹಸೀನಾ ಬೇಗಂ ಇಜೇರಿ ವಿದ್ಯಾರ್ಥಿಗಳ ಪೆÇೀಷಕಿ.
………..
ನಿನ್ನೆ ರಾತ್ರಿ ಊಟ ಮಾಡಿದ ಕೂಡಲೇ ನಮ್ಮ ಮಗ ಹೊಟ್ಟೆ ನೋವು ಎಂದು ಒದ್ದಾಡಿದ್ದಾನೆ. ವಸತಿ ನಿಲಯದಲ್ಲಿ ಸೂಜಿ ಇದ್ದರೆ, ಔಷಧಿ ಇಲ್ಲ, ಔಷಧಿ ಇದ್ದರೇ ವೈದ್ಯರಿಲ್ಲ ಹೀಗಾಗಿ ನಮ್ಮ ಮಗನನ್ನು ನಮ್ಮ ಊರಿಗೆ ಕರೆದುಕೊಂಡು ಹೋಗ್ತಾ ಇದ್ದೀನಿ.
-ಮಲ್ಲಿಕಾರ್ಜುನ ಜೇವರ್ಗಿ ವಿದ್ಯಾರ್ಥಿಯ ಪೆÇೀಷಕ.
………..
ಕಳೆದ ಹಲವು ವರ್ಷಗಳ ಹಿಂದೆಯೇ ನೀರಿನ ಶುದ್ಧಿಕರಣ ಘಟಕ ಕೆಟ್ಟು ಹೋಗಿದೆ. ಅದನ್ನು ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ. ನಿನ್ನೆ ರಾತ್ರಿ ನೀಡಿದ ಅನ್ನ ಸಾಂಬಾರ ತಿಂದ್ದು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎನ್ನುವ ಸುದ್ದಿ ತಿಳಿದು ಹೊರಗಿನಿಂದ ನೀರನ್ನು ತರೆಸಿದ್ದಾರೆ. ಇಲ್ಲಿನ ಶೌಚಾಲಯ ಗಬ್ಬೇದ್ದು ನಾರುತ್ತಿದೆ ಯಾರು ಹೇಳುವವರಿಲ್ಲ ಕೇಳುವವರಿಲ್ಲ.
-ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿ.





























