
ಸಂಜೆವಾಣಿ ವಾರ್ತೆ
ಬಸವಕಲ್ಯಾಣ:ಜೂ.೬: ಪ್ರಕೃತಿ ಮತ್ತು ಪ್ರಗತಿಯಲ್ಲಿ ಸಮತೋಲನ ಕಾಯ್ದುಕೊಂಡಾಗ ಮಾತ್ರ ಜಗದ ಜೀವರಾಶಿಗೆ ಉಜ್ವಲ ಭವಿಷ್ಯವಿದೆ ಎಂದು ಹಾರಕೂಡದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಹಾಗೂ ಪರಿಸರ ಸಂರಕ್ಷಣೆ ಜನ ಜಾಗೃತಿ ಕಾರ್ಯಕ್ರಮಕ್ಕೆ ಭಕ್ತರಿಗೆ ಸಸಿ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ತಾನು ಪರಿಸರದ ಕೂಸು ಎಂದು ಅರಿಯದೆ ಮಾನವ ಪ್ರಗತಿಯ ಹೆಸರಿನಲ್ಲಿ ಪರಿಸರದ ಮಾರಣ ಹೋಮ ಮಾಡುತ್ತಿರುವುದು ತೀವ್ರ ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ.
ಪರಿಸರದ ಸಂವರ್ಧನೆ ಮತ್ತು ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಸಸಿಗಳನ್ನು ನೆಡುವುದಷ್ಟೇ ನಮ್ಮ ಕೆಲಸವಾಗಬಾರದು, ನೆಟ್ಟಿರುವ ಪ್ರತಿ ಸಸಿ ಗಿಡವಾಗಿ ಬೆಳೆಯುವವರೆಗೆ ಮಕ್ಕಳಂತೆ ಪೋಷಣೆ ಮಾಡುವುದರ ಮೂಲಕ ಪ್ರತಿದಿನವೂ ಪರಿಸರ ದಿನವಾಗಿಸಬೇಕು, ಮುಂದಿನ ಪೀಳಿಗೆ ಖುಷಿ ಪಡುವಂತಹ ರೀತಿಯಲ್ಲಿ ಪರಿಸರ ಉಳಿಸಿ ಬೆಳೆಸಬೇಕಾಗಿದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪರಿಸರ ವಾಹಿನಿಯ ಬೀದರ ಜಿಲ್ಲಾ ಅಧ್ಯಕ್ಷರಾದ ಶೈಲೇಂದ್ರ ಕಾವಾಡೆ ಮಾತನಾಡಿ ಪರಿಸರ ಅಸಮತೋಲನದಿಂದಾಗಿ ವಾಯು ಗುಣದಲ್ಲಿ ಬದಲಾವಣೆಯಾಗಿ ಪ್ರತಿ ವರ್ಷ ಭೂತಾಪಮಾನ ಹೆಚ್ಚಳವಾಗುತ್ತಿದೆ, ಭೂತಾಪಮಾನ ಕಡಿಮೆ ಮಾಡಲು ಅತ್ಯಧಿಕ ಪ್ರಮಾಣದಲ್ಲಿ ಮರ ಗಿಡಗಳು ಬೆಳೆಸಿ ತಾಪಮಾನ ಇಳಿಸಲು ಮನವಿ ಮಾಡಿದರು.
ಅಸ್ಲo ಮಿಯಾ ಚಿಟಗುಪ್ಪ ಸ್ವಾಗತಿಸಿದರು.
ದೇವರಾಜ ಒಡೆಮನಿ ವಂದಿಸಿದರು.
ಚಿತ್ರ : ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಹಾಗೂ ಪರಿಸರ ಸಂರಕ್ಷಣೆ ಜನ ಜಾಗೃತಿ ಕಾರ್ಯಕ್ರಮಕ್ಕೆ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಭಕ್ತರಿಗೆ ಸಸಿ ನೀಡುವ ಮೂಲಕ ಚಾಲನೆ ನೀಡಿದರು.
ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ. ವಿ. ಪರಮಶಿವಮೂರ್ತಿ, ಬೀದರ ಜಿಲ್ಲಾ ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕಾವಡಿ, ಡಾ. ಅಮರೇಶ ಯತಗಲ್ಲ, ಅಸ್ಲಂಮಿಯ ಚಿಟಗುಪ್ಪ ಬಸವಣ್ಣಪ್ಪ ಗಿಲಗಿಲಿ ಉಪಸ್ಥಿತರಿದ್ದರು.

























