
ಬೀದರ್: ಸ್ವಾತಂತ್ರ್ಯ ದಿನಾಚರಣೆ ಹಾಗೂ ‘ಹರ್ ಘರ್ ತಿರಂಗಾ’ (ಮನೆ ಮನೆಯಲ್ಲೂ ರಾಷ್ಟ್ರಧ್ವಜ) ಅಭಿಯಾನದ ಅಂಗವಾಗಿ ಬೀದರ್ ಜಿಲ್ಲಾಡಳಿತದ ವತಿಯಿಂದ ನಗರದ ಐತಿಹಾಸಿಕ ಬೀದರ್ ಕೋಟೆ ಆವರಣದಲ್ಲಿ ಶುಕ್ರವಾರ ಬೈಕ್ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೀದರ್ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೀದರ್ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಈ ದೇಶಭಕ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಚರು, ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು. “ಹರ್ ಘರ್ ತಿರಂಗಾ ಕಾರ್ಯಕ್ರಮದ ಅಂಗವಾಗಿ ಇಂದು ಹಮ್ಮಿಕೊಂಡಿರುವ ಈ ಬೈಕ್ ರ್ಯಾಲಿಗೆ ಬೀದರ್‍ನ ಸ್ಥಳೀಯರು ಹಾಗೂ ಯುವಜನತೆ ಅತ್ಯುತ್ಸಾಹದಿಂದ ಬೆಂಬಲ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಶೇಷವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ನಾಳೆ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಕಾರ್ಯಕ್ರಮದಲ್ಲೂ ಬೀದರ್‍ನ ಸಮಸ್ತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು,” ಎಂದು ಕರೆ ನೀಡಿದರು.
ಬೀದರ್ ಮಹಾನಗರ ಪಾಲಿಕೆ ಆಯುಕ್ತರಾದ ಮುಕುಲ್ ಜೈನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿದ್ದರು.
ಕುತ್ತಿಗೆಗೆ ಕನ್ನಡದ ಬಾವುಟ ಧರಿಸಿದ್ದ ನೂರಾರು ದೇಶಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಗಮನ ಸೆಳೆದ ಅಧಿಕಾರಿಗಳ ಬೈಕ್ ಸವಾರಿ:
ಬಳಿಕ ಸ್ವತಃ ಜಿಲ್ಲಾಧಿಕಾರಿಗಳು ಸ್ಕೂಟರ್ ಚಲಾಯಿಸುವ ಮೂಲಕ ಬೈಕ್ ರ್ಯಾಲಿಗೆ ಚಾಲನೆ ನೀಡಿ, ಮುಂಚೂಣಿಯಲ್ಲಿ ಸಾಗಿದ್ದು ವಿಶೇಷವಾಗಿತ್ತು. ನೂರಾರು ಯುವಕರು, ಸಾರ್ವಜನಿಕರು ಹಾಗೂ ಅಧಿಕಾರಿಗಳು ತಮ್ಮ ಬೈಕ್‍ಗಳಿಗೆ ತ್ರಿವರ್ಣ ಧ್ವಜ ಹಾಗೂ ಕನ್ನಡ ಬಾವುಟಗಳನ್ನು ಕಟ್ಟಿಕೊಂಡು ರ್ಯಾಲಿಯಲ್ಲಿ ಹೆಮ್ಮೆಯಿಂದ ಹೆಜ್ಜೆ ಹಾಕಿದರು.
ಬೈಕ್ ರ್ಯಾಲಿಯುದ್ದಕ್ಕೂ ‘ಭಾರತ್ ಮಾತಾ ಕೀ ಜೈ’ ಘೋಷಣೆಗಳು ಹಾಗೂ ‘ಹರ್ ಕರಮ್ ಅಪ್ನಾ ಕರೆಂಗೇ.. ಏ ವತನ್ ತೇರೇ ಲಿಯೇ’ ಎಂಬ ದೇಶಭಕ್ತಿ ಗೀತೆಗಳು ಮೊಳಗಿದವು. ಐತಿಹಾಸಿಕ ಕೋಟೆಯ ಅವರಣದಲ್ಲಿ ನೂರಾರು ತ್ರಿವರ್ಣ ಧ್ವಜಗಳು ಹಾರಾಡುತ್ತಾ ಸಾಗಿದ ದೃಶ್ಯವು ನೋಡುಗರಲ್ಲಿ ರೋಮಾಂಚನ ಹಾಗೂ ದೇಶಭಕ್ತಿಯನ್ನು ಜಾಗೃತಗೊಳಿಸುವಂತಿತ್ತು.






























