Home ಜಿಲ್ಲೆ ಆರ್ಥಿಕ ಸಂಕಷ್ಟದಲ್ಲಿದ್ದ ಮೂವರು ಬಡ ವಿದ್ಯಾರ್ಥಿಗಳ ವೈದ್ಯರಾಗುವ ಕನಸಿಗೆ ಎಂ.ಬಿ. ಪಾಟೀಲ ಆಸರೆ

ಆರ್ಥಿಕ ಸಂಕಷ್ಟದಲ್ಲಿದ್ದ ಮೂವರು ಬಡ ವಿದ್ಯಾರ್ಥಿಗಳ ವೈದ್ಯರಾಗುವ ಕನಸಿಗೆ ಎಂ.ಬಿ. ಪಾಟೀಲ ಆಸರೆ

ವಿಜಯಪುರ, ನ. 16: ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಪ್ರವೇಶ ಪಡೆದಿದ್ದರೂ, ಆರ್ಥಿಕ ಸಂಕಷ್ಟದಿಂದ ವೈದ್ಯಕೀಯ ಶಿಕ್ಷಣ ಮುಂದುವರಿಸಲು ಪರದಾಡುತ್ತಿದ್ದ ಜಿಲ್ಲೆಯ ಮೂವರು ಪ್ರತಿಭಾವಂತ ಬಡ ವಿದ್ಯಾರ್ಥಿಗಳ ನೆರವಿಗೆ ಬಿ.ಎಲ್.ಡಿ.ಇ ಸಂಸ್ಥೆ ಧಾವಿಸಿದೆ. ಸಂಸ್ಥೆಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಮೂವರು ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ವೆಚ್ಚಕ್ಕಾಗಿ ಒಟ್ಟು 4,71,690 ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ದಾನಮ್ಮ ಹಣಮಂತ ಮಾಳಿ, ಮಕಣಾಪುರ ಎಲ್.ಟಿ.-1ರ ಸುಪ್ರೀತ ಕಾಸು ಲಮಾಣಿ ಹಾಗೂ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ಪ್ರಿಯಾಂಕಾ ಸುರೇಶ ಕುಂಬಾರ ಅವರಿಗೆ ಸಚಿವರು ನೆರವಿನ ಚೆಕ್ ವಿತರಿಸಿದರು.
ಮೂವರು ವಿದ್ಯಾರ್ಥಿಗಳ ಕಾಲೇಜು ಬೋಧನಾ ಶುಲ್ಕ, ಹಾಸ್ಟೆಲ್ ವಸತಿ, ಊಟ ಹಾಗೂ ಇತರ ಶೈಕ್ಷಣಿಕ ವೆಚ್ಚಗಳಿಗೆ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ.
ಘೋಣಸಗಿ ಗ್ರಾಮದ ದಾನಮ್ಮ ಹಣಮಂತ ಮಾಳಿ ಅವರು ನೀಟ್ ಪರೀಕ್ಷೆಯಲ್ಲಿ 514 ಅಂಕಗಳೊಂದಿಗೆ 72,996ನೇ ರ್ಯಾಂಕ್ ಪಡೆದು ಚಿಕ್ಕಬಳ್ಳಾಪುರದ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‍ನಲ್ಲಿ ಎಂ.ಬಿ.ಬಿ.ಎಸ್. ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ಅವರಿಗೆ 1,72,000 ನೆರವು ನೀಡಲಾಗಿದೆ.
ಮಕಣಾಪುರ ಎಲ್.ಟಿ.-1ರ ಸುಪ್ರೀತ ಕಾಸು ಲಮಾಣಿ ಅವರು ನೀಟ್‍ನಲ್ಲಿ 65,729ನೇ ರ್ಯಾಂಕ್ ಪಡೆದು ಬೆಳಗಾವಿ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‍ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ. ಅವರಿಗೆ 1,39,530 ನೆರವು ನೀಡಲಾಗಿದೆ.
ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ಪ್ರಿಯಾಂಕಾ ಸುರೇಶ ಕುಂಬಾರ ಅವರು ನೀಟ್ ಪರೀಕ್ಷೆಯಲ್ಲಿ 40,153ನೇ ರ್ಯಾಂಕ್ ಪಡೆದು ಬಳ್ಳಾರಿ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್‍ನಲ್ಲಿ ಎಂ.ಬಿ.ಬಿ.ಎಸ್. ಸೀಟು ಪಡೆದಿದ್ದಾರೆ. ಅವರಿಗೆ 1,60,160 ನೆರವು ವಿತರಿಸಲಾಗಿದೆ.

ಬಡತನದ ನಡುವೆಯೂ ಪ್ರತಿಭೆಯ ಸಾಧನೆ

ಮೂವರು ವಿದ್ಯಾರ್ಥಿಗಳೂ ರೈತ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದು, ಆರ್ಥಿಕ ಸಂಕಷ್ಟದ ನಡುವೆಯೂ ಶೈಕ್ಷಣಿಕ ಸಾಧನೆ ಮಾಡಿದ್ದಾರೆ. ಮಕ್ಕಳನ್ನು ವೈದ್ಯರನ್ನಾಗಿ ಮಾಡುವ ಕನಸು ಕಂಡಿದ್ದ ಪೆÇೀಷಕರಿಗೆ ವೈದ್ಯಕೀಯ ಶಿಕ್ಷಣದ ದುಬಾರಿ ವೆಚ್ಚ ದೊಡ್ಡ ಸವಾಲಾಗಿತ್ತು. ನೀಟ್‍ನಲ್ಲಿ ಉತ್ತಮ ರ್ಯಾಂಕ್ ಪಡೆದು ವೈದ್ಯಕೀಯ ಸೀಟು ಲಭಿಸಿದರೂ ಮುಂದಿನ ಶಿಕ್ಷಣದ ವೆಚ್ಚ ಭರಿಸುವುದು ಹೇಗೆ ಎಂಬ ಚಿಂತೆ ಕುಟುಂಬಗಳನ್ನು ಕಾಡುತ್ತಿತ್ತು.
ದಾನಮ್ಮ ಅವರ ತಂದೆ ಹಣಮಂತ ಮಾಳಿ ಮಾತನಾಡಿ, ಬರಗಾಲದ ಪರಿಸ್ಥಿತಿಯಲ್ಲಿ ಮಗಳು ನೀಟ್ ಪಾಸಾಗಿ ವೈದ್ಯಕೀಯ ಸೀಟು ಪಡೆದಿದ್ದರೂ ಆರ್ಥಿಕ ಸಮಸ್ಯೆಯಿಂದಾಗಿ ಮುಂದಿನ ಶಿಕ್ಷಣದ ಬಗ್ಗೆ ಆತಂಕವಿತ್ತು. ಇಂತಹ ಸಂದರ್ಭದಲ್ಲಿ ಸಚಿವ ಎಂ.ಬಿ. ಪಾಟೀಲ ಅವರು ನೆರವಿಗೆ ಬಂದಿರುವುದು ನಮ್ಮ ಪಾಲಿಗೆ ದೇವರ ವರದಾನವಾಗಿದೆ. ಮಗಳು ವೈದ್ಯೆಯಾಗುವ ಕನಸು ನನಸಾಗಲು ಅವರು ಸಹಕಾರ ನೀಡಿದ್ದಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ದಾನಮ್ಮ ಮಾತನಾಡಿ, ಸಚಿವರು ನೀಡಿರುವ ಆರ್ಥಿಕ ನೆರವಿನಿಂದ ನಮ್ಮ ಕುಟುಂಬದ ಮೇಲಿದ್ದ ದೊಡ್ಡ ಹೊರೆ ಕಡಿಮೆಯಾಗಿದೆ. ವೈದ್ಯೆಯಾಗಬೇಕೆಂಬ ನನ್ನ ಕನಸು ನನಸಾಗಲು ಈ ನೆರವು ಪ್ರೇರಣೆಯಾಗಿದೆ ಎಂದು ಸಂತಸ ಹಂಚಿಕೊಂಡರು.
ಸುಪ್ರೀತ ಅವರ ತಂದೆ ಕಾಸು ಲಮಾಣಿ ಮಾತನಾಡಿ, ಬಡ ಕುಟುಂಬದ ನಮಗೆ ಮಗನ ವೈದ್ಯಕೀಯ ಶಿಕ್ಷಣದ ವೆಚ್ಚ ಭರಿಸುವುದು ಕಷ್ಟವಾಗಿತ್ತು. ಸಚಿವರು ದೇವರ ರೂಪದಲ್ಲಿ ಬಂದು ನೆರವಾಗಿದ್ದಾರೆ. ಮಗನನ್ನು ವೈದ್ಯನನ್ನಾಗಿ ಮಾಡಬೇಕೆಂಬ ನಮ್ಮ ಕನಸಿಗೆ ಬಲ ತುಂಬಿದ್ದಾರೆ. ಅವರಿಗೆ ಸದಾ ಋಣಿಯಾಗಿರುತ್ತೇವೆ ಎಂದರು.
ಸುಪ್ರೀತ ಮಾತನಾಡಿ, ಎಂ.ಬಿ.ಬಿ.ಎಸ್. ಪೂರ್ಣಗೊಳಿಸಿದ ಬಳಿಕ ಎಂ.ಡಿ. ಮಾಡಬೇಕೆಂಬ ಆಸೆ ಇದೆ. ಸಚಿವರ ನೆರವು ನನ್ನ ವಿದ್ಯಾಭ್ಯಾಸ ಮುಂದುವರಿಸಲು ದೊಡ್ಡ ಸಹಕಾರಿಯಾಗಿದೆ. ಅವರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಪ್ರಿಯಾಂಕಾ ಅವರ ತಂದೆ ಸುರೇಶ ಕುಂಬಾರ ಮಾತನಾಡಿ, ನಮ್ಮ ಕುಟುಂಬದಲ್ಲಿ ನಾಲ್ವರು ಮಕ್ಕಳಿದ್ದು, ಎಲ್ಲರ ಶಿಕ್ಷಣದ ಜವಾಬ್ದಾರಿ ನಮ್ಮ ಮೇಲಿದೆ. ಮಗಳು ನೀಟ್ ಪಾಸಾಗಿ ವೈದ್ಯಕೀಯ ಸೀಟು ಪಡೆದಾಗ ಸಂತೋಷವಾಗಿತ್ತು. ಆದರೆ ಶಿಕ್ಷಣದ ವೆಚ್ಚದ ಬಗ್ಗೆ ಚಿಂತೆಯೂ ಇತ್ತು. ಸಚಿವ ಎಂ.ಬಿ. ಪಾಟೀಲ ಅವರು ನೆರವು ನೀಡಿರುವುದು ನಮಗೆ ವರದಾನವಾಗಿದೆ. ಮಗಳು ಎಂ.ಡಿ. ಮಾಡುವ ಕನಸು ಹೊಂದಿದ್ದು, ಅದಕ್ಕೆ ಈ ಸಹಾಯ ದೊಡ್ಡ ಆಸರೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜವಾಬ್ದಾರಿಯುತ ವೈದ್ಯರಾಗಿ ರೂಪುಗೊಳ್ಳಿ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ ಅವರು, ವಿದ್ಯಾರ್ಥಿಗಳು ತಮಗೆ ದೊರೆತಿರುವ ಆರ್ಥಿಕ ನೆರವನ್ನು ಸದುಪಯೋಗಪಡಿಸಿಕೊಂಡು ಶ್ರದ್ಧೆ, ಪರಿಶ್ರಮ ಮತ್ತು ಬದ್ಧತೆಯಿಂದ ಅಧ್ಯಯನ ಮಾಡಬೇಕು. ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಭವಿಷ್ಯದಲ್ಲಿ ಕೇವಲ ವೈದ್ಯಕೀಯ ಪದವಿ ಪಡೆದರೆ ಸಾಲದು, ಜವಾಬ್ದಾರಿಯುತ ಹಾಗೂ ಆದರ್ಶ ವೈದ್ಯರಾಗಿ ರೂಪುಗೊಳ್ಳಬೇಕು. ಸಮಾಜದ ಬಡವರು, ದುರ್ಬಲರು ಮತ್ತು ಅಗತ್ಯವಿರುವವರಿಗೆ ಮಾನವೀಯತೆಯಿಂದ ವೈದ್ಯಕೀಯ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್.ಎಸ್. ಪಾಟೀಲ ಹಾಗೂ ವಿದ್ಯಾರ್ಥಿಗಳ ಪೆÇೀಷಕರು ಉಪಸ್ಥಿತರಿದ್ದರು.