
ಭಾಲ್ಕಿ:ಜೂ.೬: ವಿದ್ಯಾರ್ಥಿಗಳು ಗಿಡ ನೆಡುವುದರಿಂದ ಬಾಲ್ಯದಿಂದಲೇ ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಕಾಳಜಿ ಹೆಚ್ಚಾಗುತ್ತದೆ ಎಂದು ಭಾಲ್ಕಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ ಹರಸೂರ ಹೇಳಿದರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಸಮುಚ್ಛಯದಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಭಾಲ್ಕಿ, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ನ್ಯಾಯಾವಾದಿಗಳ ಸಂಘ ಮತ್ತು ಚನ್ನಬಸವೇಶ್ವರ ಗುರುಕುಲ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮ ಮತ್ತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಆವರಣ ಮತ್ತು ಮನೆಯ ಪರಿಸರದಲ್ಲಿ ಗಿಡವನ್ನು ನೆಟ್ಟರಷ್ಟೇ ವಿದ್ಯಾರ್ಥಿಗಳ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ, ನೆಟ್ಟ ಗಿಡಕ್ಕೆ ಕಾಲಕಾಲಕ್ಕೆ ಪೋಷಣೆ ಮಾಡಬೇಕು. ಗಿಡಕ್ಕೆ ನಿತ್ಯ ನೀರು ಹಾಕಿ, ಗೊಬ್ಬರ ನೀಡಿ ಮಗುವಿನಂತೆ ಆರೈಕೆ ಮಾಡಿದಾಗ ಮಾತ್ರ ಮುಂದೆ ಗಿಡ ಮರವಾಗಿ ಬೆಳೆಯುತ್ತವೆ ಎಂದರು.
ಪ್ರಕೃತಿಯಲ್ಲಿನ ಗಿಡ ಮರಗಳನ್ನು ಕಾಳಜಿ ವಹಿಸಿ ರಕ್ಷಿಸಿದರೆ ಮನುಷ್ಯ ಹಾಗೂ ಪ್ರಾಣಿ, ಪಕ್ಷಿ ಸಂಕುಲಕ್ಕೆ ಶುದ್ಧ, ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಪ್ರಾಕೃತಿಕ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ.
ಪ್ರಕೃತಿ ನಾಶದಿಂದ ಜೀವ ಸಂಕುಲಕ್ಕೆ ಆಪತ್ತು ಎದುರಾಗಿದೆ. ಸಸಿ ನೆಡುವ ಕಾರ್ಯಕ್ರಮಗಳು ಕೇವಲ ಪರಿಸರ ದಿನಾಚರಣೆಗೆ, ದಾಖಲೆಗಾಗಿ ಸೀಮಿತವಾಗದೆ ವರ್ಷವಿಡೀ ನಮ್ಮ ಪರಿಸರದಲ್ಲಿ ಸಸಿಗಳನ್ನು ನೆಟ್ಟು ಲಾಲನೆ ಪಾಲನೆ ಮಾಡಬೇಕು. ಗಿಡಮರಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಪ್ರಕೃತಿ ಮತ್ತು ಪರಿಸರದಲ್ಲಿ ಅದ್ಭುತ ಶಕ್ತಿ ಅಡಗಿದೆ. ಬಸವಾದಿ ಶರಣರ ಅನುಭಾವದಿಂದ ರಚನೆಗೊಂಡ ವಚನ ಸಾಹಿತ್ಯ ಪ್ರಕೃತಿ, ಪರಿಸರದಲ್ಲಿ ಉದಯಸಿದೆ. ಪ್ರಕೃತಿ ಮಡಿಲಿನಲ್ಲಿ ಬುದ್ಧನಿಗೆ ಜ್ಞಾನೋದಯ ಆಗಿತ್ತು ಎಂಬುದನ್ನು ಇತಿಹಾಸದಿಂದ ತಿಳಿದು ಬರುತ್ತದೆ.
ಹಾಗಾಗಿ ಅಂತಹ ಪ್ರಕೃತಿ ಮತ್ತು ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಸಿವಿಲ್ ನ್ಯಾಯಧೀಶ ದೇಶಭೂಷಣ ಕೌಜಲಗಿ ಬಸವ ಗುರುವಿನ ಪೂಜೆ ನೇರವೇರಿಸಿದರು. ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಸಚೀನ ಪಾಟೀಲ್ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಈ ಸಂಧರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೋಸಂಬೆ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹೇಶ ರಾಚೋಟೆ, ಉಪಾಧ್ಯಕ್ಷ ಮಕರಂದ ಮಾನಕಾರಿ, ಸಹ ಕಾರ್ಯದರ್ಶಿ ನೀಲಕಂಠ ಬಿರಾದಾರ್, ಆಡಳಿತಾಧಿಕಾರಿ ಮೋಹನ ರೆಡ್ಡಿ ಸೇರಿದಂತೆ ಮುಂತಾದವರು ಇದ್ದರು. ಲಕ್ಷ್ಮಣ ಮೇತ್ರೆ ನಿರೂಪಿಸಿ, ವಂದಿಸಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಜನ್ಮದಿನ, ಹಬ್ಬ ಹರಿದಿನಗಳದಂದು ತಮ್ಮ ಮನೆ ಪರಿಸರ, ಶಾಲಾ ಆವರಣದಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಅವುಳನ್ನು ಪೋಷಿಸಿ ಹಸಿರುಮಯ ವಾತಾವರಣ ನಿರ್ಮಿಸುವ ಸಂಕಲ್ಪ ತೊಡಬೇಕು.
- ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ
ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಕಾನೂನು ಅರಿವು ಹೊಂದುವುದು ಅವಶ್ಯಕವಾಗಿದೆ. ಕಾನೂನಿನ ಅರಿವಿನಿಂದ ಹಕ್ಕುಗಳು ರಕ್ಷಣೆ ಆಗುತ್ತವೆ. ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಲು ಸಹಾಯ ಮಾಡುತ್ತದೆ ಮತ್ತು ಅಪರಾಧಗಳಿಂದ ದೂರವಿರಲು ಸಹಾಯಕವಾಗುತ್ತವೆ.
- ರಾಜಶೇಖರ ಹರಸೂರ ಹಿರಿಯ ಶ್ರೇಣಿ ನ್ಯಾಯಾಧೀಶರು ಭಾಲ್ಕಿ

























