Home ಜಿಲ್ಲೆ ಜಾಗೃತಿ ಮೂಡಿಸುವ ಕಾರ್ಯವಾಗಲಿ

ಜಾಗೃತಿ ಮೂಡಿಸುವ ಕಾರ್ಯವಾಗಲಿ

ಧಾರವಾಡ, ಅ.೧೦: ಜಿಲ್ಲೆಯಲ್ಲಿ ಹೆಚ್.ಐ.ವಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದಾಗ್ಯೂ, ಸೋಂಕಿನ ಸಂಪೂರ್ಣ ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ ಜನರಲ್ಲಿ ನಿರಂತರ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್. ಆರ್ ಅವರು ಹೇಳಿದರು.


ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾಮಟ್ಟದ ಯುವಜನೋತ್ಸವ ಹಾಗೂ ಹೆಚ್.ಐ.ವಿ., ಏಡ್ಸ್ ತಡೆಗಟ್ಟಲು ಪ್ರಚಾರಾಂದೋಲನ ಕಾರ್ಯಕ್ರಮದ ಅಂಗವಾಗಿ ಮ್ಯಾರಥಾನ್‌ಕ್ಕೆ ಚಾಲನೆ ನೀಡಿ, ಮಾತನಾಡಿದರು.


ಯುವಜನರು ಹೆಚ್.ಐ.ವಿ., ಏಡ್ಸ್ ಕುರಿತು ಸರಿಯಾದ ಮಾಹಿತಿಯನ್ನು ಪಡೆದು ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜಿಲ್ಲೆಯಲ್ಲಿ ಹೆಚ್.ಐ.ವಿ ಸೋಂಕಿನ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಹಾಗೂ ಸಂಬAಧಿಸಿದ ಸಂಸ್ಥೆಗಳು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ವಿವೇಕಾನಂದ ರಕ್ತದಾನ ಕೇಂದ್ರ ಸೇರಿದಂತೆ ವಿವಿಧ ಸಂಸ್ಥೆಗಳು ಈ ಕಾರ್ಯದಲ್ಲಿ ಕೈಜೋಡಿಸುತ್ತಿವೆ. ಇಂತಹ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಸೋಂಕಿನ ಕುರಿತು ಅರಿವು ಮೂಡಿಸಲು ಸಹಕಾರಿಯಾಗಿವೆ. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದರೂ ಜಾಗೃತಿ ಕಾರ್ಯವನ್ನು ನಿರಂತರವಾಗಿ ಮುಂದುವರಿಸುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.


ಯುವಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯ: ಯುವಜನರು ದೇಶದ ಭವಿಷ್ಯವಾಗಿದ್ದು, ಅವರಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ವಿಶೇಷವಾಗಿ ೧೫ ರಿಂದ ೨೫ ವರ್ಷದೊಳಗಿನ ಯುವಕರು ಹೆಚ್.ಐ.ವಿ ಸೋಂಕಿನ ಬಗ್ಗೆ ಸರಿಯಾದ ಮಾಹಿತಿ ಹೊಂದಿರಬೇಕು. ತಾವು ತಿಳಿದುಕೊಂಡ ಮಾಹಿತಿಯನ್ನು ತಮ್ಮ ಸ್ನೇಹಿತರು, ಸಹಪಾಠಿಗಳು ಹಾಗೂ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಬೇಕು. ಈ ಮೂಲಕ ಸಮಾಜದಲ್ಲಿ ಹೆಚ್.ಐ.ವಿ ಸೋಂಕಿನ ಕುರಿತು ಜಾಗೃತಿ ಹೆಚ್ಚಿಸಲು ಸಾಧ್ಯವಾಗುತ್ತದೆ. ಹೆಚ್.ಐ.ವಿ ಸೋಂಕಿನ ಕುರಿತು ಕೇವಲ ಮ್ಯಾರಥಾನ್ ಅಥವಾ ಒಂದು ದಿನದ ಕಾರ್ಯಕ್ರಮ ಆಯೋಜಿಸುವುದರಿಂದ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ಬದಲಾಗಿ, ಈ ವಿಷಯದ ಕುರಿತು ಯುವಜನರು ಪರಸ್ಪರ ಚರ್ಚೆ ನಡೆಸಬೇಕು. ಸೋಂಕು ಹರಡುವ ವಿಧಾನಗಳು, ತಡೆಗಟ್ಟುವ ಕ್ರಮಗಳು ಹಾಗೂ ಚಿಕಿತ್ಸೆಯ ಮಹತ್ವದ ಕುರಿತು ನಿಖರವಾದ ಮಾಹಿತಿಯನ್ನು ಪಡೆದು ಇತರರಿಗೂ ತಿಳಿಸಬೇಕು. ಸಮಾಜದ ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಕೈಜೋಡಿಸಿದಾಗ ಮಾತ್ರ ಸೋಂಕು ನಿಯಂತ್ರಣದ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಸೋಂಕಿತರು ಭಯಪಡದೆ ಚಿಕಿತ್ಸೆ ಪಡೆಯಬೇಕು: ಹೆಚ್.ಐ.ವಿ ಸೋಂಕು ದೃಢಪಟ್ಟವರು ಸಮಾಜದ ಭಯದಿಂದ ಅಥವಾ ಇತರರು ತಮ್ಮನ್ನು ದೂರವಿಡುತ್ತಾರೆ ಎಂಬ ಆತಂಕದಿAದ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಬಾರದು. ಸೋಂಕಿತರ ಬಗ್ಗೆ ತಾರತಮ್ಯ ಮಾಡದೆ, ಅವರಿಗೆ ಗೌರವ ಮತ್ತು ಸಹಕಾರ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೆಚ್.ಐ.ವಿ ಸೋಂಕಿಗೆ ಒಳಗಾದವರು ವೈದ್ಯರ ಸಲಹೆಯಂತೆ ನಿಯಮಿತವಾಗಿ ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ಚಿಕಿತ್ಸೆಯನ್ನು ಪಡೆಯಬೇಕು. ಈ ಚಿಕಿತ್ಸೆಯು ದೇಹದಲ್ಲಿನ ವೈರಸ್ ಪ್ರಮಾಣವನ್ನು ನಿಯಂತ್ರಿಸಲು ಹಾಗೂ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಚಿಕಿತ್ಸೆಯನ್ನು ನಿರಂತರವಾಗಿ ಪಡೆಯುವುದರಿಂದ ಸೋಂಕಿತರು ದೀರ್ಘಕಾಲ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ. ಆದ್ದರಿಂದ ಸೋಂಕಿತರು ಯಾವುದೇ ಆತಂಕಕ್ಕೆ ಒಳಗಾಗದೆ ಚಿಕಿತ್ಸೆ ಮುಂದುವರಿಸಬೇಕು ಎಂದು ಹೇಳಿದರು.


ಹೆಚ್.ಐ.ವಿ ಸೋಂಕಿನ ನಿಯಂತ್ರಣಕ್ಕಾಗಿ ಮೂರು ಪ್ರಮುಖ ಗುರಿಗಳನ್ನು ಸಾಧಿಸುವುದು ಅಗತ್ಯವಾಗಿದೆ. ಮೊದಲನೆಯದಾಗಿ, ಸೋಂಕು ಹೊಂದಿರುವವರಲ್ಲಿ ಶೇ.೯೫ ರಷ್ಟು ಜನರನ್ನು ಗುರುತಿಸುವುದು. ಎರಡನೆಯದಾಗಿ, ಗುರುತಿಸಲಾದ ಸೋಂಕಿತರಲ್ಲಿ ಶೇ.೯೫ ರಷ್ಟು ಜನರಿಗೆ ಚಿಕಿತ್ಸೆ ದೊರೆಯುವಂತೆ ಮಾಡುವುದು. ಮೂರನೆಯದಾಗಿ, ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಶೇ.೯೫ ರಷ್ಟು ಜನರ ದೇಹದಲ್ಲಿನ ವೈರಸ್ ಪ್ರಮಾಣವನ್ನು ನಿಯಂತ್ರಿಸುವುದಾಗಿದೆ.


ಈ ಮೂರು ಗುರಿಗಳನ್ನು ಸಾಧಿಸುವ ಮೂಲಕ ಹೆಚ್.ಐ.ವಿ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಹಾಗೂ ಸಂಬAಧಿಸಿದ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಮಾಧ್ಯಮಗಳ ಪಾತ್ರ ಮಹತ್ವದ್ದು: ಹೆಚ್.ಐ.ವಿ ಸೋಂಕಿನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸೋಂಕಿನ ಲಕ್ಷಣಗಳು ಕಂಡುಬAದಲ್ಲಿ ಅಥವಾ ಸೋಂಕಿನ ಸಾಧ್ಯತೆಯ ಬಗ್ಗೆ ಆತಂಕವಿದ್ದಲ್ಲಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜನರಿಗೆ ಮಾಹಿತಿ ನೀಡಬೇಕು. ಸೋಂಕು ದೃಢಪಟ್ಟರೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಆರಂಭಿಸಿ, ಅದನ್ನು ನಿರಂತರವಾಗಿ ಮುಂದುವರಿಸುವAತೆ ಜಾಗೃತಿ ಮೂಡಿಸಬೇಕು. ಹೆಚ್.ಐ.ವಿ ಸೋಂಕಿನ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರಮಾಡಿ, ಸೋಂಕಿತರ ಬಗ್ಗೆ ಸಮಾಜದಲ್ಲಿ ಸಹಾನುಭೂತಿ ಮತ್ತು ಗೌರವ ಮನೋಭಾವ ಬೆಳೆಸಬೇಕು. ಪ್ರತಿಯೊಬ್ಬರೂ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು, ಸೋಂಕು ನಿಯಂತ್ರಣಕ್ಕೆ ಕೈಜೋಡಿಸಿದಾಗ ಆರೋಗ್ಯಕರ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಪರಶುರಾಮ್ ಎಫ್.ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.


ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್.ಪಾತ್ರೋಟ ಅವರು ನಿರೂಪಿಸಿ, ವಂದಿಸಿದರು.