Home ಜಿಲ್ಲೆ ವಿಧಾನ ಪರಿಷತ್ ಚುನಾವಣೆ: ಎನ್‌ಡಿಎ ಗೆಲುವು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ: ಭಗವಂತ ಖೂಬಾ

ವಿಧಾನ ಪರಿಷತ್ ಚುನಾವಣೆ: ಎನ್‌ಡಿಎ ಗೆಲುವು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ: ಭಗವಂತ ಖೂಬಾ

ಬೀದರ್: ಕರ್ನಾಟಕ ವಿಧಾನಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ನಾಲ್ಕೂ ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಜಯಗಳಿಸಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ದ್ವೇಷ ರಾಜಕಾರಣಕ್ಕೆ ಶಿಕ್ಷಿತ ಮತದಾರರು ನೀಡಿದ ತಕ್ಕ ಉತ್ತರವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ವಿಧಾನಪರಿಷತ್ತಿನ ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಎನ್‌ಡಿಎ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿರುವ ಅವರು, ಮೈತ್ರಿಕೂಟವನ್ನು ಬೆಂಬಲಿಸಿ ಆಶೀರ್ವದಿಸಿದ ಪದವೀಧರರು ಹಾಗೂ ಶಿಕ್ಷಕ ಮತದಾರರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಪರಿಕಲ್ಪನೆ ಹಾಗೂ ಸಮರ್ಥ ನಾಯಕತ್ವಕ್ಕೆ ಶಿಕ್ಷಿತ ಸಮಾಜ ನೀಡಿರುವ ಬೆಂಬಲವೇ ಈ ಐತಿಹಾಸಿಕ ಗೆಲುವು. ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮತದಾರರು ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅಪಪ್ರಚಾರ, ಭ್ರಷ್ಟಾಚಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಅನಗತ್ಯ ದಾಳಿಗಳಿಗೆ ಪದವೀಧರರು ಮತ್ತು ಶಿಕ್ಷಕರು ಚುನಾವಣೆಯ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಈ ಫಲಿತಾಂಶ ಕೇವಲ ವಿಧಾನಪರಿಷತ್ ಚುನಾವಣೆಗೆ ಸೀಮಿತವಾಗದೆ, ಮುಂಬರುವ ಎಲ್ಲ ಚುನಾವಣೆಗಳಿಗೂ ದಿಕ್ಸೂಚಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರವರೆಗೆ ಕಾಂಗ್ರೆಸ್ ನಾಯಕರ ದುರಾಡಳಿತ ಹಾಗೂ ದ್ವೇಷದ ರಾಜಕಾರಣಕ್ಕೆ ಜನರು ಬೇಸತ್ತಿದ್ದಾರೆ. ಅದರ ಪರಿಣಾಮವೇ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿದ್ದಾರೆ.
‘ಇನ್ನಾದರೂ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡು ಉಳಿದ ಅಧಿಕಾರಾವಧಿಯಲ್ಲಿ ಜನಪರ ಹಾಗೂ ಉತ್ತಮ ಆಡಳಿತ ನೀಡಬೇಕು. ಇಲ್ಲವಾದರೆ ೨೦೨೮ರ ವಿಧಾನಸಭಾ ಚುನಾವಣೆಯಲ್ಲಿಯೂ ಇದೇ ರೀತಿಯ ಫಲಿತಾಂಶವನ್ನು ಕಾಂಗ್ರೆಸ್ ಎದುರಿಸಬೇಕಾಗುತ್ತದೆ’ ಎಂದು ಖೂಬಾ ಎಚ್ಚರಿಸಿದ್ದಾರೆ.
ವಿಧಾನಪರಿಷತ್ತಿನ ಚುನಾವಣೆಯಲ್ಲಿ ಎನ್‌ಡಿಎ ಸಾಧಿಸಿರುವ ಗೆಲುವು ರಾಜ್ಯದಲ್ಲಿ ರಾಜಕೀಯ ಬದಲಾವಣೆಯ ಮುನ್ಸೂಚನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.