Home ಜಿಲ್ಲೆ ಕಲಬುರಗಿ ಎಸ್‍ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ:ಜಿಲ್ಲೆಯಲ್ಲಿ ಒಟ್ಟು 18,94,144 ಮತದಾರರು:ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ

ಎಸ್‍ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ:ಜಿಲ್ಲೆಯಲ್ಲಿ ಒಟ್ಟು 18,94,144 ಮತದಾರರು:ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ

ಕಲಬುರಗಿ, ಅ.28: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. 9 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಅಂತಿಮ ಪಟ್ಟಿಯ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 18,94,144 ಮತದಾರರಿದ್ದು, ಇದರಲ್ಲಿ 9,61,210 ಪುರುಷರು, 9,32,722 ಮಹಿಳೆಯರು ಹಾಗೂ 212 ಇತರ (ಥರ್ಡ್ ಜೆಂಡರ್) ಮತದಾರರು ಸೇರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ತಿಳಿಸಿದರು.
ಮಂಗಳವಾರ ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮೀಡಿಯಾ ಸೆಂಟರ್ ನಲ್ಲಿ ಎಸ್.ಐ.ಆರ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ವಿವರ ನೀಡಿದ ಅವರು, ಮನೆ-ಮನೆ ಸಮೀಕ್ಷೆ, ಎನ್ಯುಮರೇಷನ್ ಹಾಗೂ ಮ್ಯಾಪಿಂಗ್ ಕಾರ್ಯಗಳು ಪೂರ್ಣಗೊಂಡ ಬಳಿಕ ಆಗಸ್ಟ್ 24 ರಂದು ಕರಡು ಎಲೆಕ್ಟೋರಲ್ ರೋಲ್ ಪ್ರಕಟಿಸಲಾಗಿತ್ತು. ಕರಡು ಪಟ್ಟಿ ಪ್ರಕಟಿಸಿದಾಗ 18,49,575 ಮತದಾರರಿದ್ದರು. ನಂತರದ ಹಕ್ಕು ಮತ್ತು ಆಕ್ಷೇಪಣೆ (ಕ್ಲೈಮ್ಸ್ & ಅಬ್ಜೆಕ್ಷನ್) ಅವಧಿಯಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ, ನೆಟ್ ಎಡಿಷನ್ ಆಗಿ ಒಟ್ಟು 44,559 ಹೊಸ ಮತದಾರರನ್ನು ಅಂತಿಮ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿದರು.
ಎಸ್‍ಐಆರ್ ಅವಧಿಯಲ್ಲಿ ಎದುರಾದ ಅನಮಲಿ ಮತ್ತು ನೋ ಮ್ಯಾಪಿಂಗ್‍ಗೆ ಸಂಬಂಧಿಸಿದಂತೆ 1,05,511 ನೋಟೀಸ್‍ಗಳನ್ನು ಜಾರಿಗೊಳಿಸಿ ಪರಿಶೀಲನೆ ನಡೆಸಲಾಗಿತ್ತು. ಸೂಕ್ತ ದಾಖಲೆಗಳಿಲ್ಲದ, ಮೃತಪಟ್ಟ ಹಾಗೂ ಬೇರೆಡೆಗೆ ಸ್ಥಳಾಂತರಗೊಂಡ (ಡುಪ್ಲಿಕೇಟ್) 1,905 ಮತದಾರರನ್ನು ಮಾತ್ರ ಈ ಅಂತಿಮ ಪಟ್ಟಿಯಿಂದ ಕೈಬಿಡಲಾಗಿದ್ದು, ಅರ್ಹರಿಗೆ ಸಂಪೂರ್ಣ ಅವಕಾಶ ಕಲ್ಪಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಪ್ರಸ್ತುತ ಪಟ್ಟಿಯಲ್ಲಿ 18 ರಿಂದ 19 ವರ್ಷದೊಳಗಿನ 28,966 ಯಂಗ್ ವೋಟರ್ಸ್ ಇದ್ದಾರೆ. ಇದರೊಂದಿಗೆ 25,501 ಪಿ.ಡಬ್ಲ್ಯೂ.ಡಿ (ಅಂಗವಿಕಲ) ಮತದಾರರು, 85 ವರ್ಷಕ್ಕಿಂತ ಮೇಲ್ಪಟ್ಟ 14,897 ಹಿರಿಯ ಮತದಾರರು ಹಾಗೂ 896 ಸೇವಾ ನಿರತ ಯೋಧರಿದ್ದಾರೆ ಎಂದು ತಿಳಿಸಿದರು.
ಅಲ್ಲದೆ, ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆಯನ್ನು ಸಹ ತರ್ಕಬದ್ಧಗೊಳಿಸಲಾಗಿದ್ದು 1,200 ಕ್ಕಿಂತ ಹೆಚ್ಚು ಮತದಾರರಿರುವ ಕಡೆಗಳಲ್ಲಿ ಹೊಸ ಮತಗಟ್ಟೆಗಳನ್ನು ಸೃಷ್ಟಿಸಲಾಗಿದೆ. ಇದರಿಂದಾಗಿ ಎಸ್‍ಐಆರ್ ಗೂ ಮುಂಚೆ ಇದ್ದ 2,400 ಮತಗಟ್ಟೆಗಳಿಗೆ ಹೆಚ್ಚುವರಿಯಾಗಿ 61 ಸೇರ್ಪಡೆಯಾಗಿ, ಒಟ್ಟು ಮತಗಟ್ಟೆಗಳ ಸಂಖ್ಯೆ 2,461 ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಇಪಿ ರೇಶಿಯೋ 65.44% ಹಾಗೂ ಲಿಂಗಾನುಪಾತ ಸಾವಿರ ಪುರುಷರಿಗೆ 971 ಮಹಿಳೆಯರು ಇದ್ದಾರೆ ಎಂದು ಅವರು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಸಿಂಧೆ ಅವರು ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದ್ದು, ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತರಾದವರು ಮತ್ತು ಈಗಾಗಲೇ ನೋಂದಾಯಿಸಿಕೊಂಡವರು ಎಂಬ ನಾಲ್ಕು ವಿಭಾಗಗಳ ಅಡಿಯಲ್ಲಿ ಹೆಸರುಗಳನ್ನು ಕೈಬಿಡಲಾಗಿದೆ. ಕೆಲವು ಕಡೆ ಹೆಸರು ತೆಗೆದುಹಾಕಿರುವ ಬಗ್ಗೆ ದೂರುಗಳು ಬಂದಿದ್ದರೂ, ನಿಯಮಾನುಸಾರವೇ ಕರಡು ಪಟ್ಟಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 324 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಒಟ್ಟಾರೆಯಾಗಿ ಪರಿಷ್ಕರಣೆ ವೇಳೆ 48,513 ಮತದಾರರ ಸೇರ್ಪಡೆ, 3,954 ಹೆಸರುಗಳ ಕೈಬಿಡುವಿಕೆ ಹಾಗೂ 42,108 ತಿದ್ದುಪಡಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೆ ನಿಖರ ದಾಖಲೆಗಳೊಂದಿಗೆ ಈ ಪ್ರಕ್ರಿಯೆ ನಡೆಸಲಾಗಿದೆ ಎಂದರು.