Home ಜಿಲ್ಲೆ ಕಲಬುರಗಿ ಕಿಡ್ನಿ ಕಾಯಿಲೆ ಸೀಮಿತವಾದ ಸಮಸ್ಯೆಯಾಗಿ ಉಳಿದಿಲ್ಲ

ಕಿಡ್ನಿ ಕಾಯಿಲೆ ಸೀಮಿತವಾದ ಸಮಸ್ಯೆಯಾಗಿ ಉಳಿದಿಲ್ಲ

ಕಲಬುರಗಿ,ಏ. 28: ಕಿಡ್ನಿ (ಮೂತ್ರಪಿಂಡ) ಕಾಯಿಲೆಗಳು ಕೇವಲಕೆಲವೇ ಜನರಿಗೆ ಸೀಮಿತವಾದ ಸಮಸ್ಯೆಯಾಗಿ ಉಳಿದಿಲ್ಲ, ಇದೀಗ ಇದು ಸಾರ್ವಜನಿಕರನ್ನು ಕಾಡುವ ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿ ಬೆಳೆಯುತ್ತಿದೆ. “ಬದಲಾದ ಜೀವನಶೈಲಿ, ಹೆಚ್ಚುತ್ತಿರುವ ಮಧುಮೇಹ (ಶುಗರ್) ಮತ್ತು ರಕ್ತದೊತ್ತಡ (ಬಿಪಿ). ವಿಪರೀತ ಬಿಸಿಲು ಹಾಗೂ ದೇಹದಲ್ಲಿ ನೀರಿನಂಶ ಕಡಿಮೆಯಾಗುವಂತಹ (ನಿರ್ಜಲೀಕರಣ) ಕಾರಣಗಳಿಂದಾಗಿ ಕರ್ನಾಟಕದಲ್ಲಿ ಕಿಡ್ನಿ ಕಾಯಿಲೆಗಳು ಹೆಚ್ಚಾಗುತ್ತಿವೆ” ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದರು.
ಪರಿಸರ ಮಾಲಿನ್ಯ ಮತ್ತು ಕೆಲಸದ ಸ್ಥಳದಲ್ಲಿ ಎದುರಾಗುವ ಹಾನಿಕಾರಕ ಅಂಶಗಳು ಕೂಡ ಕಿಡ್ನಿ ಸಮಸ್ಯೆಗಳಿಗೆ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಕಾರಣವಾಗುತ್ತಿವೆ ಎಂಬುದನ್ನು ಅವರು ಎತ್ತಿತೋರಿಸಿದರು. ಭಾರವಾದ ಲೋಹಗಳು. ಕೀಟನಾಶಕಗಳು ಮತ್ತು ಕಾರ್ಖಾನೆಗಳ ರಾಸಾಯನಿಕಗಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಕಿಡ್ನಿ ವೈಫಲ್ಯ ಹಾಗೂ ಕ್ಯಾನ್ಸರ್ ಉಂಟಾಗುತ್ತಿದೆ. ಹಾಗಾಗಿ, ಈ ಬಗ್ಗೆ, ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು, ಆರಂಭದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳುವುದು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದರು.
ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಮೂತ್ರಶಾಸ್ತ್ರ ಮತ್ತು ರೊಬೋಟಿಕ್ ಸರ್ಜರಿ ತಜ್ಞರಾದ ಡಾ. ಮೊಹಮ್ಮದ್ ಶಾಹಿದ್ ಅಲಿ ಅವರು ಗುಣಮುಖರಾದ ರೋಗಿಯೊಬ್ಬರ ಮಾಹಿತಿ ಹಂಚಿಕೊಂಡರು. “48 ವರ್ಷದ ರೋಗಿಯೊಬ್ಬರು ಈ ಹಿಂದೆ ಬೇರೆ ಆಸ್ಪತ್ರೆಯಲ್ಲಿ ಕಿಡ್ನಿ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆದಿದ್ದರು, ಆದರೆ ಅವರಿಗೆ ಮತ್ತೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಈ ಬಾರಿ ರೋಗದ ತೀವ್ರತೆ ಹೆಚ್ಚಾಗಿತ್ತು. ಕ್ಯಾನ್ಸರ್ ಇಡೀ ಕಿಡ್ನಿಗೆ ಮತ್ತು ಸುತ್ತಲಿನ ರಕ್ತನಾಳಗಳಿಗೆ ಹರಡಿತ್ತು. ಹೀಗಾಗಿ, ಅತ್ಯಂತ ಸಂಕೀರ್ಣವಾದ ಮರು-ಶಸ್ತ್ರಚಿಕಿತ್ಸೆ ಮಾಡಿ ಸುಮಾರು 10 ಸೆಂ.ಮೀ.ನಷ್ಟು ದೊಡ್ಡದಿದ್ದ ಗಡ್ಡೆ (ಟ್ಯೂಮರ್) ಹಾಗೂ ಹಾನಿಗೊಳಗಾಗಿದ್ದ ರಕ್ತನಾಳಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು. ವಿಶೇಷವೆಂದರೆ, ಈ ಚಿಕಿತ್ಸೆಯ ಬಳಿಕ ಅವರಿಗೆ ಬೇರೆ ಯಾವುದೇ ಚಿಕಿತ್ಸೆಯ ಅಗತ್ಯವೇ ಬಿದ್ದಿಲ್ಲ ಮತ್ತು ಕಳೆದ ಐದು ವರ್ಷಗಳಿಂದ ಅವರು ಕ್ಯಾನ್ಸರ್ ಮುಕ್ತರಾಗಿ ಆರೋಗ್ಯವಾಗಿದ್ದಾರೆ. ಮತ್ತೆ ಮರುಕಳಿಸುವ ಹಾಗೂ ಅಪಾಯಕಾರಿ ಹಂತದಲ್ಲಿರುವ ಕ್ಯಾನ್ಸರ್ ಪ್ರಕರಣಗಳಲ್ಲೂ ನಿಖರವಾದ ಶಸ್ತ್ರಚಿಕಿತ್ಸೆ ಮಾಡಿದರೆ ರೋಗಿಗಳನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ” ಎಂದು ಅವರು ಭರವಸೆ ನೀಡಿದರು.
ಇದೇ ಆಸ್ಪತ್ರೆಯ ನೆಫಾಲಜಿ ಮತ್ತು ಕಿಡ್ನಿ ಕಸಿ ತಜ್ಞರಾದ ಡಾ. ಮೊಹಮ್ಮದ್ ಫಹಾದ್ ಖಾನ್ ಅವರು 55 ವರ್ಷದ ಸುಭಾಷ್ ಚಂದ್ರ ಅವರ ಪ್ರಕರಣವನ್ನು ವಿವರಿಸಿದರು.
ಸುಭಾಷ್ ಅವರು ಬಹುಕಾಲದಿಂದ ಮಧುಮೇಹ ಮತ್ತು ಬಿಪಿಯಿಂದ ಬಳಲುತ್ತಿದ್ದು, ಇದು ಕೊನೆಗೆ ಕಿಡ್ನಿ ವೈಫಲ್ಯಕ್ಕೆ ತಿರುಗಿತ್ತು. ಇದರಿಂದಾಗಿ ಅವರು ವಿಪರೀತ ಸುಸ್ತು ಮತ್ತು ದೇಹದ ಊತದಿಂದ ಬಳಲುತ್ತಿದ್ದರು, ದೈನಂದಿನ ಕೆಲಸಗಳನ್ನು ಮಾಡಲೂ ಅವರಿಗೆ ಕಷ್ಟವಾಗುತ್ತಿತ್ತು. ತಪಾಸಣೆ ಮತ್ತು ಆಪ್ತಸಮಾಲೋಚನೆ ನಡೆಸಿದ ಬಳಿಕ ರೊಬೊಟಿಕ್ ತಂತ್ರಜ್ಞಾನದ ಮೂಲಕ ಅವರಿಗೆ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಯಿತು. ಅವರ ಪತ್ನಿಯೇ ಅವರಿಗೆ ಕಿಡ್ನಿ ದಾನ ಮಾಡಿದ್ದು ವಿಶೇಷ ಶಸ್ತ್ರಚಿಕಿತ್ಸೆಯ ಬಳಿಕ ಇದೀಗ ಅವರು ಸಂಪೂರ್ಣ ಗುಣಮುಖರಾಗಿ ತಮ್ಮ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ಕನಿಷ್ಠ ನೋವು ಮತ್ತು ಗಾಯದೊಂದಿಗೆ ಮಾಡುವ ಇಂತಹ ಆಧುನಿಕ ರೊಬೊಟಿಕ್ ಕಸಿ ಚಿಕಿತ್ಸೆಗಳು ರೋಗಿಗಳ ಜೀವ ಉಳಿಸುವುದು ಮಾತ್ರವಲ್ಲದೆ, ಅವರು ಯಾರ ಮೇಲೂ ಅವಲಂಬಿತರಾಗದೆ ಉತ್ತಮ ಗುಣಮಟ್ಟದ ಜೀವನ ನಡೆಸಲು ನೆರವಾಗುತ್ತವೆ ಎಂದು ಡಾ. ಫಹಾದ್ ಖಾನ್ ತಿಳಿಸಿದರು.
ಕಾಯಿಲೆಯನ್ನು ಆರಂಭದಲ್ಲೇ ಪತ್ತೆಹಚ್ಚುವುದು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಹಾಗೂ ಅಂಗದಾನದ ಬಗ್ಗೆ ಹೆಚ್ಚು ಒತ್ತು ನೀಡಬೇಕಾದ ಅನಿವಾರ್ಯತೆಯನ್ನು ತಜ್ಞರು ಒತ್ತಿ ಹೇಳಿದರು. ಕಿಡ್ನಿ ಕಾಯಿಲೆಗಳ ಹೆಚ್ಚುತ್ತಿರುವ ಪ್ರಮಾಣವನ್ನು ತಗ್ಗಿಸಲು ಪ್ರತಿಯೊಬ್ಬರ ಸಹಕಾರ ಮತ್ತು ಜಾಗೃತಿ ಅತಿಮುಖ್ಯ ಎಂದು ಅವರು ಹೇಳಿದರು.