
ಕಲಬುರಗಿ:ಜೂ.10: ನಗರದ ಹಿರಿಯ ಸಿವಿಲ್ ಇಂಜಿನಿಯರ್ ಹಾಗೂ ಸಮಾಜ ಸೇವಕ ಮುರಳೀಧರ ಜಿ. ಕರಲಗಿಕರ್ ಅವರಿಗೆ ಬೆಂಗಳೂರಿನ ಜ್ಞಾನಭಾರತಿ-ಕಲಾಗ್ರಾಮದ ಸಭಾಂಗಣದಲ್ಲಿ ನಡೆದ ಕನ್ನಡ ಸಾಂಸ್ಕøತಿಕ ಹಬ್ಬದ ಕಾರ್ಯಕ್ರಮದಲ್ಲಿ `ಪ್ರೈಡ್ ಆಫ್ ಕರ್ನಾಟಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ಮೀಡಿಯಾ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹಾಗೂ ಮಕ್ಕಳ ತಜ್ಞೆ ಡಾ. ಪದ್ಮಾ ಪ್ರಕಾಶ್ ಅವರು ಕರಲಗಿಕರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಶಿವಗಂಗೆ ಕ್ಷೇತ್ರದ ಶ್ರೀ ಹೊನ್ನಮ್ಮ ಗವಿಮಠದ ಸದ್ಧರ್ಮ ಸಿಂಹಾಸನ ಸಂಸ್ಥಾನದ ಅಧ್ಯಕ್ಷರಾದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕರಲಗಿಕರ್ ಅವರು ಸಮಾಜ ಸೇವೆಯಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ, ಅದರಲ್ಲೂ ಕೋವಿಡ್ ಸಂಕಷ್ಟದ ವೇಳೆ ಬಡವರು, ನಿರ್ಗತಿಕರಿಗೆ ಸಹಾಯ ಮಾಡಿದ್ದನ್ನು ಮರೆಯುವಂತಿಲ್ಲ. ಮಿಗಿಲಾಗಿ ವಿನೂತನ ಕಲ್ಪನೆಯೊಂದಿಗೆ ರೈತರು ಬೆಳೆದ ಹಣ್ಣು, ತರಕಾರಿಗಳ ಖರೀದಿಗಾಗಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಮಾಡಿ ರೈತರಿಗೆ ಆಸರೆಯಾಗಿದ್ದು ಶ್ಲಾಘನೀಯ. ಈ ಕಾರಣಕ್ಕಾಗಿಯೇ ರಾಜ್ಯ ಮಟ್ಟದ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಕಾರ್ಯಕ್ರಮದ ಆಯೋಜಕ, ಕರ್ನಾಟಕ ಮೀಡಿಯಾ ಕ್ಲಬ್ ಅಧ್ಯಕ್ಷ ರಮೇಶ ಎಸ್.ಜಿ. ಹೇಳಿದರು.






















