
ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೬: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕಾರ ಹುಣ್ಣಿಮೆಯನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲಾಯಿತು.
ರೈತ ಸಂಸ್ಕೃತಿ, ಜಾನುವಾರುಗಳ ಮೇಲಿನ ಕೃತಜ್ಞತೆ ಹಾಗೂ ಗ್ರಾಮೀಣ ಸಂಪ್ರದಾಯಗಳ ಸಮ್ಮಿಲನವಾದ ಈ ಹಬ್ಬವನ್ನು ವೀಕ್ಷಿಸಲು ಜಿಲ್ಲೆ ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಕಾರ ಹುಣ್ಣಿಮೆಯ ಅಂಗವಾಗಿ ರೈತರು ತಮ್ಮ ಕೃಷಿ ಚಟುವಟಿಕೆಗೆ ಸಹಕಾರಿಯಾಗಿರುವ ಎತ್ತು, ಎಮ್ಮೆ, ಹಸು, ಹೋರಿ, ನಾಯಿಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಕುಂಟೆ, ಗುದ್ದಲಿ, ಸನಿಕೆ, ಕುಡುಗೋಲು ಸೇರಿದಂತೆ ಕೃಷಿ ಉಪಕರಣಗಳನ್ನು ತೊಳೆದು, ಬಣ್ಣ ಹಚ್ಚಿ ಅಲಂಕರಿಸಿ ಪೂಜಿಸಿದರು. ದುಡಿದ ಎತ್ತುಗಳಿಗೆ ತತ್ತಿ, ಕುಸಬಿ, ಗಾಣದ ಎಣ್ಣೆ, ಅರಿಶಿಣ ಸೇರಿದಂತೆ ಪೌಷ್ಟಿಕ ಆಹಾರ ನೀಡುವ ಮೂಲಕ ಗೌರವ ಸಲ್ಲಿಸಿದರು.
ಬೆಳಿಗ್ಗೆ ಸುಮಾರು ೧೦ ಗಂಟೆಗೆ ಗ್ರಾಮದ ಪ್ರಮುಖರಾದ ರಾಮನಗೌಡ ಪಾಟೀಲ ಹಾಗೂ ಹಿರಿಯರ ಸಮ್ಮುಖದಲ್ಲಿ ಅವರ ಮನೆತನದಿಂದ ಪೂಜೆ ಹಾಗೂ ಮೆರವಣಿಗೆಗೆ ಚಾಲನೆ ದೊರೆಯಿತು. ಬ್ಯಾಂಡ್, ಡೊಳ್ಳು, ತಮಟೆ ಹಾಗೂ ತಾಳಮದ್ದಲೆಗಳ ನಾದದ ನಡುವೆ ಸಿಂಗರಿಸಲ್ಪಟ್ಟ ಎತ್ತುಗಳ ಮೆರವಣಿಗೆ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಿಸಿತು.
ವಿಶೇಷವಾಗಿ ಬಣ್ಣ ಬಣ್ಣದ ಅಲಂಕಾರ, ಗೆಜ್ಜೆ, ಜುಲ್ಲಾ, ಬಲೂನ್‌ಗಳಿಂದ ಸಿಂಗಾರಗೊAಡ ೪೦ಕ್ಕೂ ಹೆಚ್ಚು ಬಲಿಷ್ಠ ಎತ್ತುಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ರೈತರು ಎತ್ತುಗಳ ಮೇಲೆ ಗುಲಾಲ್ ಹಾಗೂ ಚುರುಮುರಿ ಎರಚಿ ಸಂಭ್ರಮ ವ್ಯಕ್ತಪಡಿಸಿದರು.
ಮಧ್ಯಾಹ್ನದ ಬಳಿಕ ಆರಂಭವಾದ ಸಾಂಪ್ರದಾಯಿಕ ‘ಕಾರಿ’ ಕಾರ್ಯಕ್ರಮ ಜನರ ಆಕರ್ಷಣೆಯ ಕೇಂದ್ರಬಿAದುವಾಗಿತ್ತು. ಬಲಿಷ್ಠ ಎತ್ತುಗಳನ್ನು ನಿಯಂತ್ರಿಸುವ ಸಾಹಸಮಯ ದೃಶ್ಯವನ್ನು ವೀಕ್ಷಿಸಲು ವಿಜಯಪುರ ಜಿಲ್ಲೆ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ಭಾಗಗಳಿಂದ ಜನರು ಆಗಮಿಸಿದ್ದರು. ಈ ಬಾರಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ ಹುಣ್ಣಿಮೆ ಉತ್ಸವವನ್ನು ವೀಕ್ಷಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಗ್ರಾಮದ ಸಂಪ್ರದಾಯದAತೆ ಪ್ರಮುಖ ಗೌಡರ ಮನೆಯಿಂದ ಕೆಂಪು ಮತ್ತು ಬಿಳಿ ಬಣ್ಣದ ಎರಡು ಬಾಸಿಂಗ್ ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು. ಮೊದಲು ಯಾವ ಎತ್ತು ಮುಂದೆ ಓಡುತ್ತದೆ ಎಂಬುದರ ಆಧಾರದ ಮೇಲೆ ಆ ವರ್ಷದ ಕೃಷಿ ಹಾಗೂ ವ್ಯಾಪಾರದ ಬಗ್ಗೆ ಶುಭ-ಅಶುಭ ಸೂಚನೆ ಎನ್ನುವ ನಂಬಿಕೆ ಗ್ರಾಮಸ್ಥರಲ್ಲಿ ಇದೆ. ಈ ಬಾರಿ ಕೆಂಪು ಎತ್ತು ಮುಂಚೂಣಿಯಲ್ಲಿ ಓಡಿದ ಹಿನ್ನೆಲೆಯಲ್ಲಿ ತೊಗರಿ, ಬೆಲ್ಲ, ಗೋಧಿ ಹಾಗೂ ಕೆಂಪು ಬಣ್ಣದ ವಸ್ತುಗಳ ಬೆಲೆ ಏರಿಕೆಯಾಗಲಿದೆ ಎಂಬ ನಂಬಿಕೆಯನ್ನು ರೈತರು ವ್ಯಕ್ತಪಡಿಸಿದರು.
ಉತ್ಸವದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಖಂಡಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಬಬಲೇಶ್ವರ ಪೊಲೀಸ್ ಠಾಣೆ ಅಧಿಕಾರಿಗಳು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು. ಸಾವಿರಾರು ಜನರು ಶಾಂತಿಯುತವಾಗಿ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮದಿAದ ತಮ್ಮ ಮನೆಗಳಿಗೆ ಮರಳಿದರು.
ಕಾಖಂಡಕಿಯ ಕಾರ ಹುಣ್ಣಿಮೆ ಗ್ರಾಮೀಣ ಸಂಸ್ಕೃತಿ, ರೈತ ಜೀವನ ಹಾಗೂ ಜಾನುವಾರುಗಳ ಮೇಲಿನ ಗೌರವವನ್ನು ಪ್ರತಿಬಿಂಬಿಸುವ ಅಪರೂಪದ ಸಂಪ್ರದಾಯವಾಗಿ ಮತ್ತೊಮ್ಮೆ ಜನಮನ ಸೆಳೆಯಿತು.































