Home ಜಿಲ್ಲೆ ನವೆಂಬರನಲ್ಲಿ ಕನ್ನಡವೇ ಸತ್ಯ ಕಾರ್ಯಕ್ರಮ

ನವೆಂಬರನಲ್ಲಿ ಕನ್ನಡವೇ ಸತ್ಯ ಕಾರ್ಯಕ್ರಮ

ಬೀದರ್: ಕರ್ನಾಟಕ ರಕ್ಷಣಾ ವೇದಿಕೆಯು ನಗರದಲ್ಲಿ ನವೆಂಬರನಲ್ಲಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು.
ವೇದಿಕೆಯ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ವೇದಿಕೆ ಜಿಲ್ಲೆಯಲ್ಲಿ ಕನ್ನಡ ಪರ ವಾತಾವರಣ ನಿರ್ಮಿಸಲು ಶ್ರಮಿಸುತ್ತಿದೆ. ಬರುವ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಗ್ರಾಮ ಶಾಖೆ ರಚಿಸಲಾಗುವುದು. ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಲಾಗುವುದು ಎಂದು ತಿಳಿಸಿದರು.
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕಾರ್ಯಕ್ರಮದ ಅದ್ಧೂರಿ ಯಶಸ್ವಿಗೆ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೈಜೋಡಿಸಬೇಕು ಎಂದು ವೇದಿಕೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಖಾದರ್ ಪಾಶಾ ಹೇಳಿದರು.
ತಾಲ್ಲೂಕು ಅಧ್ಯಕ್ಷರಾದ ಬಂಡೆಪ್ಪ ಕರಸಣ್ಣ, ಲಕ್ಷ್ಮಣ ಅಟ್ಕರ್, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಸೋಮಶೇಖರ ಸಜ್ಜನ್, ವಿನಾಯಕ ರೆಡ್ಡಿ, ಮಲ್ಲಿಕಾರ್ಜುನ ದಾವುದ್, ಮಹೇಶ್, ಪರಮೇಶ್ವರ್, ಮೇಘರಾಜ, ಪ್ರಭು, ಬಸವರಾಜ ಮತ್ತಿತರರು ಇದ್ದರು.