
ಬೆಂಗಳೂರು, ಜೂ. ೮- ರಾಜ್ಯಸಭೆಗೆ ಮಾಜಿ ಪ್ರಧಾನಿ ದೇವೇಗೌಡರನ್ನು ಆಯ್ಕೆ ಮಾಡಲು ನಿರಾಕರಿಸುವ ಮೂಲಕ ಬಿಜೆಪಿ, ಜೆಡಿಎಸ್‌ಗೆ ಅವಮಾನ ಮಾಡಿದ್ದರೂ ಕೇಂದ್ರ ಸಚಿವ ಸ್ಥಾನ ಉಳಿಸಿಕೊಳ್ಳುವ ಉದ್ದೇಶದಿಂದ ಜೆಡಿಎಸ್ ಇದನ್ನು ಸಹಿಸಿಕೊಂಡಿರುವುದು ಆಶ್ಚರ್ಯಕರ. ಈ ಅಪಮಾನವನ್ನು ಒಪ್ಪಿಕೊಳ್ಳುವುದು ರಾಜಕೀಯ ಶರಣಾಗತಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ನಿನ್ನೆ ತಡರಾತ್ರಿ ಬಿಜೆಪಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ರಾಜ್ಯಸಭಾ ನಾಮ ನಿರ್ದೇಶನ ನಿರಾಕರಿಸಿ ಅವರ ಬದಲಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ. ನಾಗರಾಜ್ ಅವರನ್ನು ರಾಜ್ಯಸಭೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.
ಬಿಜೆಪಿ ಮತ್ತು ಅದರ ನಾಯಕತ್ವವು ಜೆಡಿಎಸ್‌ಗೆ ಪದೇ ಪದೇ ಮಾಡುತ್ತಿರುವ ಅವಮಾನವನ್ನು ಕೇವಲ ಯಾವುದೇ ಬೆಲೆಯಲ್ಲಾದರೂ ಸಚಿವ ಸ್ಥಾನ ಉಳಿಸಿಕೊಳ್ಳುವ ಉದ್ದಶೇಶದಿಂದ ಹೆಚ್.ಡಿ. ಕುಮಾರಸ್ವಾಮಿ ನಿರಂತರವಾಗಿ ಸಹಿಸಿಕೊಳ್ಳುತ್ತಿರುವುದು ಆಶ್ಚರ್ಯಕರವೂ ಕಣ್ಣ ತೆರೆಸುವಂತದ್ದಾಗಿದೆ. ಈ ಅವಮಾನವನ್ನು ಒಪ್ಪಿಕೊಳ್ಳುವುದು ರಾಜಕೀಯ ಶರಣಾಗತಿಯಾಗಿದೆ ಎಂದು ಅವರು ಹೇಳಿದ್ದಾರೆ.
೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜು ಅವರು ಹೆಚ್.ಡಿ. ದೇವೇಗೌಡರನ್ನು ಸೋಲಿಸಿದ್ದರು. ಬಳಿಕ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಮಾಜಿ ಪ್ರಧಾನಿಯ ಸ್ಥಾನಮಾನಕ್ಕೆ ಗೌರವ ನೀಡಿ ಕಾಂಗ್ರೆಸ್ ಪಕ್ಷ ಹಾಗೂ ಸೋನಿಯಾಗಾಂಧಿ ಅವರು ದೇವೇಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಬೆಂಬಲ ನೀಡಿದ್ದರು.
ದೇವೇಗೌಡರು ಇಂದು ಬಿಜೆಪಿ ವಿರುದ್ಧ ಹಲವಾರು ಬಾರಿ ವಿರೋಧ ವ್ಯಕ್ತಪಡಿಸಿ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿಗೆ ಜತೆ ಕೈಜೋಡಿಸಿದರೆ ಅವರನ್ನು ತ್ಯಜಿಸುತ್ತೇನೆ ಎಂದು ಸಾರ್ವಜನಿಕವಾಗಿಯೇ ಹೇಳಿದ್ದರೂ ಎಂಬುದನ್ನು ನೆನಪಿಸಿರುವ ಸುರ್ಜೇವಾಲಾ ಅವರು, ಇಷ್ಟಾದರೂ ೨೦೨೩ರ ಅಕ್ಟೋಬರ್‌ನಲ್ಲಿ ಜೆಡಿಎಸ್, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತು. ನಂತರ ಕುಮಾರಸ್ವಾಮಿ ಮೋದಿ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾದರು. ಈಗ ೨೦೨೬ರ ಜೂನ್ ೭ ರಂದು ಬಿಜೆಪಿ ಮಾಜಿ ಪ್ರಧಾನಿಗಳಿಗೆ ರಾಜ್ಯಸಭೆಗೆ ಆಯ್ಕೆಯಾಗಲು ಒಪ್ಪಿಗೆ ನೀಡದೆ ತನ್ನ ಪಕ್ಷದ ಪದಾಧಿಕಾರಿಯನ್ನೇ ಆಯ್ಕೆ ಮಾಡಿದೆ.
ಇದನ್ನು ನೋಡಿದರೆ ಜೆಡಿಎಸ್ ಅಧಿಕಾರಕ್ಕಾಗಿ ಯಾವುದೆ ಬೆಲೆ ತೆರಲು, ಅಧಿಕಾರಕ್ಕಾಗಿ ಎಲ್ಲವನ್ನು ತ್ಯಾಗ ಮಾಡುವ ಏಕೈಕ ರಾಜಕೀಯ ಧ್ಯೇಯ ಎಂಬುದು ಸ್ಪಷ್ಟವಾಗಿದೆ ಎಂದು ಸುರ್ಜೇವಾಲ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

























