Home ಮುಖಪುಟ ಸುದ್ದಿ ಸುರ್ಜೇವಾಲಾಗೆ ಜೆಡಿಎಸ್ ತಿರುಗೇಟು

ಸುರ್ಜೇವಾಲಾಗೆ ಜೆಡಿಎಸ್ ತಿರುಗೇಟು

ಬೆಂಗಳೂರು, ಜೂ. ೮- ರಾಜ್ಯಸಭಾ ಚುನಾವಣೆಯ ವಿಷಯವನ್ನಿಟ್ಟುಕೊಂಡು ಜೆಡಿಎಸ್ ವಿರುದ್ಧ ಟೀಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದ್ದು,


ಕೇವಲ ವಸೂಲಿ ಮಾಡಿಕೊಂಡು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ಸುರ್ಜೇವಾಲಾ ಉರುಫ್ ವಸೂಲಿವಾಲ ದೇವಗೌಡರ ವಿಷಯ ಬಿಟ್ಟು ಕಾಂಗ್ರೆಸ್ ಪಕ್ಷ ಸರ್ಕಾರದಲ್ಲಿ ನಡೆಯುತ್ತಿರುವ ಒಳ ಜಗಳ, ಒಳ ಸಂಚು ಹತ್ತಿಕ್ಕುವ ಕಡೆ ಗಮನಹರಿಸಲಿ ಎಂದು ಹೇಳಿದೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಜೆಡಿಎಸ್ ಪಕ್ಷ ಪೋಸ್ಟ್ ಮಾಡಿದ್ದು, ದೇವೇಗೌಡರು ರಾಷ್ಟ್ರ ಕಂಡ ಮೇರು ನಾಯಕರು. ಪ್ರಧಾನಿಯಾದ ಏಕೈಕ ಕನ್ನಡಿಗರು, ಇಮ್ಮಡಿ ಪುಲಿಕೇಶಿ ನಂತರ ಭರತ ಭೂಮಿಯನ್ನು ಆಳಿದ ಶ್ರೇಷ್ಟ ನಾಯಕರು. ಆ ಹಿರಿಯ ಜೀವದ ವಿಷಯದಲ್ಲಿ ರಾಜಕೀಯ ಮಾಡುವುದು ನಿಮ್ಮ ನೀಚತನ ಪರಾಕಾಷ್ಠೆ ಎಂದು ಜೆಡಿಎಸ್ ಕಿರಿಕಾಡಿದೆ.


ಮಿಸ್ಟರ್ ಸುರ್ಜೇವಾಲ ಜೆಡಿಎಸ್ ಬಗ್ಗೆ ಮಾತನಾಡುವ ಮನ್ನ ಕಾಂಗ್ರೆಸ್‌ನ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಿ. ೧೯೯೭ ರಲ್ಲಿ ಕುತಂತ್ರದಿಂದ ದೇವೇಗೌಡ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ದ್ರೋಹಿಗಳು ನೀವು. ೨೦೧೯ ರಲ್ಲಿ ಮೈತ್ರಿ ನಾಟಕವಾಡಿ ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿ ಸರ್ಕಾರ ಕೆಡವಿದ್ದು ಕಾಂಗ್ರೆಸ್ಸೇ. ಕಾಂಗ್ರೆಸ್‌ನದ್ದು ಒಳಗೆ ಜಾತ್ಯಾತೀತೆಯ ಮುಖವಾಡ, ಹೊರಗೆ ಜಾತಿ ವಿದ್ವೇಷದ ರಾಜಕಾರಣ ಎಂದು ಹರಿಹಾಯ್ದಿದೆ.


ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಮನಮೋಹನ್‌ಸಿಂಗ್ ಅವರಂತಹ ನಾಯಕರುಗಳನ್ನು ನಿಮ್ಮ ನಕಲಿ ಗಾಂಧಿ ಕುಟುಂಬ ಹೇಗೆ ಅಪಮಾನಿಸಿ ಹೇಗೆಲ್ಲಾ ನಡೆಸಿಕೊಂಡಿತ್ತು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಮೊದಲು ನಿಮ್ಮ ತಟ್ಟೆಯಲ್ಲಿರುವ ಹೆಗ್ಗಣ ನೋಡಿಕೊಳ್ಳಿ ಮಿಸ್ಟರ್ ವಸೂಲಿ ವಾಲ ಎಂದು ಟ್ವೀಟ್ ಮಾಡಿದೆ.
ತಮಿಳುನಾಡಿನಲ್ಲಿ ಡಿಎಂಕೆ ಜತೆ ಚುನಾವಣಾ ಮೈತ್ರಿ ಮಾಡಿಕೊಂಡು ಫಲಿತಾಂಶದ ಬಳಿಕ ಗೆದ್ದೆತ್ತಿನ ಬಾಲ ಹಿಡಿದ ನೀತಿಗೆಟ್ಟ ಕಾಂಗ್ರೆಸ್ಸಿಗರೆ ಜೆಡಿಎಸ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಫೋಸ್ಟ್‌ನಲ್ಲಿ ಜೆಡಿಎಸ್ ಹೇಳಿದೆ.