Home ಜಿಲ್ಲೆ ತುಮಕೂರು ಕಲ್ಲೂರು ಗ್ರಾ.ಪಂ. ಅಮೃತ ಸರೋವರ ಕಾಮಗಾರಿಯಲ್ಲಿ ಅವ್ಯವಹಾರ: ತನಿಖೆಗೆ ಒತ್ತಾಯ

ಕಲ್ಲೂರು ಗ್ರಾ.ಪಂ. ಅಮೃತ ಸರೋವರ ಕಾಮಗಾರಿಯಲ್ಲಿ ಅವ್ಯವಹಾರ: ತನಿಖೆಗೆ ಒತ್ತಾಯ

oplus_1026

ಗುಬ್ಬಿ, ಅ. ೧೭- ಕಲ್ಲೂರು ಗ್ರಾಮ ಪಂಚಾಯತಿ ವತಿಯಿಂದ ಕೈಗೊಳ್ಳಲಾಗಿರುವ ಅಮೃತ ಸರೋವರ ಹಾಗೂ ಕರಿಬೇವಿನ ಸಸಿ ಕಾಮಗಾರಿಯಲ್ಲಿ ಸುಮಾರು ೭೦ ಲಕ್ಷ ಅವ್ಯವಹಾರ ನಡೆದಿದ್ದು ಇದರ ಸಮಗ್ರ ತನಿಖೆ ನಡೆಸುವಂತೆ ಗ್ರಾಮಸ್ಥ ಡಿ. ಮಂಜುನಾಥ್ ಆಗ್ರಹಿಸಿದರು.


ತಾಲ್ಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿ ಮುಂಭಾಗ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯಾದ ಅಮೃತ ಸರೋವರ ಯೋಜನೆಯಡಿ ಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿನಂದಿ ಗ್ರಾಮದ ಸ. ನಂ. ೬೨ ಮತ್ತು ೬೫ ರ ಜಮೀನಿನಲ್ಲಿ ಈ ಕಾಮಗಾರಿ ನಡೆದಿದ್ದು ಸುಮಾರು ೪೦ ಲಕ್ಷ ರೂ. ಅವ್ಯವಹಾರ ನಡೆದಿದ್ದು ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಲ್ಲಿ ಸುಮಾರು ೩೨ ಸಾವಿರ ಕರಿಬೇವಿನ ಸಸಿ ಹಾಕಿದ್ದು ಅದರಲ್ಲಿ ಸುಮಾರು ೩೨ ಲಕ್ಷ ಹಣ ದುರುಪಯೋಗವಾಗಿದೆ. ಇದರ ಸಂಬಂಧ ಪಟ್ಟಂತೆ ತನಿಖೆ ನಡೆಸುವಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಜಿಲ್ಲಾ ಓಂಬಡ್ಸ್ ಪರ್ಸನ್ ಅವರಿಗೆ ನಾನು ದೂರು ಸಲ್ಲಿಸಿದ್ದು ಇದು ನರೇಗಾ ಯೋಜನೆಗೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಯನಿರ್ವಾಹಕ ಅಧಿಕಾರಿ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ತಾಂತ್ರಿಕ ಸಿಬ್ಬಂದಿ. ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಲು ದಿನಾಂಕ ನಿಗದಿಪಡಿಸಿ ಉದ್ದೇಶ ಪೂರ್ವಕವಾಗಿ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಆರೋಪಿಸಿದರು.


ಎಲ್ಲ ಅಧಿಕಾರಿಗಳು ವಿನಾಕಾರಣ ನೆಪ ಹೇಳಿಕೊಂಡು ಸ್ಥಳಕ್ಕೆ ಬಾರದೆ ನಿರ್ಲಕ್ಷ ವಹಿಸಿದ್ದಾರೆ. ಕರೆ ಮಾಡಿದರೆ ಪಿಡಿಒ ಸಂಪರ್ಕ ಕ್ಕೆ ಸಿಗುತ್ತಿಲ್ಲ. ಒಂಬಡ್ಸ್ ಪರ್ಸನ್. ಕಾರ್ಯನಿರ್ವಾಹಕ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರ ಹಿಂದೆ ದೊಡ್ಡ ಅವ್ಯವಹಾರ ನಡೆದಿರುವುದು ಕಂಡು ಬರುತ್ತಿದೆ.


ಮೊದಲು ಅಧಿಕಾರಿಗಳು ಕಳ್ಳಾಟ ಬಿಟ್ಟು ನರೇಗಾ ಯೋಜನೆಯಡಿ ನಡೆದಿರುವ ಅವ್ಯವಹಾರದ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಇಲ್ಲವಾದರೆ ಸರ್ಕಾರದ ಮಟ್ಟದ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಈ ಅವ್ಯವಹಾರದಲ್ಲಿ ಶಾಮೀಲಾಗಿರುವ ಪಂಚಾಯಿತಿ ಸಿಬ್ಬಂದಿ. ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿದರು. ಸ್ಥಳೀಯ ಯುವಕ ನಿತೀನ್ ಮಾತನಾಡಿ, ಗ್ರಾಮ ಪಂಚಾಯ್ತಿಗೆ ಸರಿಯಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬರುವುದಿಲ್ಲ. ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ ನಾವು ಯಾರ ಬಳಿ ನಮ್ಮ ಸಮಸ್ಯೆ ಹೇಳಬೇಕು ಎಂದು ಬೇಸರ ವ್ಯಕ್ತಪಡಿಸಿದರು.


ಮುಖಂಡ ಶಾಂತರಾಜು ಮಾತನಾಡಿ, ಗ್ರಾಮ ಪಂಚಾಯ್ತಿಯಲ್ಲಿ ಪರಿಶಿಷ್ಟ ಹಣ ದುರುಪಯೋಗವಾಗುತ್ತಿದೆ. ಪರಿಶಿಷ್ಟ ಅಭಿವೃದ್ಧಿಗೆ ಹಣ ಬಳಸದೆ ಗ್ರಾಮ ಪಂಚಾಯಿತಿ ಅವರ ಮನಸೋ. ಇಚ್ಚೆ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಈ ಸಂದರ್ಭದಲ್ಲಿ ಸತೀಶ್, ಚಿದಾನಂದ್, ವಿಷ್ಣು, ಕಾರ್ತಿಕ್, ದರ್ಶನ್, ಶಿವು ಮತ್ತಿತರರು ಉಪಸ್ಥಿತರಿದ್ದರು.