
ಕಲಬುರಗಿ:ಮೊದಲೇ ಬರಗಾಲದ ಬಿಸಿಯಲ್ಲಿ ಬೇಯುತ್ತಿರುವ ಕಲಬುರಗಿ ದಕ್ಷಿಣ ಕ್ಷೇತ್ರದ ಸಾವಿರಾರು ರೈತರು ಮುಂಗಾರು ಹೆಸರು, ಉದ್ದು, ಎಳ್ಳು, ಸೋಯಾ ಸೇರಿದಂತೆ ಹಲವು ಬೆಳೆ ಬಿತ್ತಿ ಹಾನಿ ಅನುಭವಿಸಿದ್ದಾರೆ, ಹಾನಿಗೊಳಗಾದ ರೈತರಲ್ಲಿ ಬೆಳೆವಿಮೆ ಮಾಡಿಸಿರುವ ರೈತರಿಗೆ ತಕ್ಷಣ ವಿಮಾ ಕಂಪನಿ ಮಧ್ಯಂತರ ಪರಿಹಾರ ನೀಡೋ ಬದಲು ಅಲ್ಪಸ್ವಲ್ಪ ಬೆಳೆದಿದೆ ಎಂದು ಬರೆದುಕೊಡುವಂತೆ ರೈತರಿಗೆ ದುಂಬಾಲು ಬಿದ್ದಿರುವ ಪ್ರಕರಣಗಳು ತಮ್ಮ ಗಮನಕ್ಕೆ ಬಂದಿವೆ ಎಂದು ದೂರಿರುವ ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲರು, ವಿಮಾ ಕಂಪನಿಯವರು ರೈತರೊಂದಿಗೆ ಆಡೋ ಚೆಲ್ಲಾಟ ನಿಲ್ಲಬೇಕು, ಇಲ್ದೆ ಹೋದಲ್ಲಿ ತಾವು ಸುಮ್ಮನಿರೋದಿಲ್ಲವೆಂದು ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಗುಡುಗಿದ್ದಾರೆ.
ಇಲ್ಲಿನ ತಾಪಂ ಸಭಾಂಗಣದಲ್ಲಿ ಮಂಗಳವಾರ ಸುದೀರ್ಘ 5 ಗಂಟೆ ತಾಲೂಕು ಕೆಡಿಪಿ ಸಭೆ ನಡೆಸಿದ ಶಾಸಕರು, ದಕ್ಷಿಣ ಮತಕ್ಷೇತ್ರದಲ್ಲಿ 4 ಸಾವಿರದಷ್ಟು ರೈತರು ಮುಂಗಾರು ಬೆಳೆವಿಮೆ ಮಾಡಿಸಿದ್ದಾರೆ. ಇವರಿಗೆ ಮಧ್ಯಂತರ ಪರಿಹಾರ ಜಮಾ ಮಾಡದೆ ಬಿಟ್ಟು ವಿಮಾ ಕಂಪನಿಯವರು ಅವರಿಗೆ ಮೋಸ ಮಾಡುವ ಹುನ್ನಾರದಲ್ಲಿದ್ದಾರೆಂಬ ಆರೋಪಗಳಿವೆ. ತಕ್ಷಣ ಇದನ್ನು ಪರಿಶೀಲಿಸಿ ರೈತರಿಗೆ ಯಾವುದೇ ಕಾರಣಕ್ಕೂ ವಿಮಾ ಕಂಪನಿಗಳಿಂದ ಹಾಗೂ ಇನ್ನಿತರರಿಂದ ಮೋಸವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಬೆಯಲ್ಲಿದ್ದ ಕೃಷಿ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.
ಸಭೆಯಿಂದಲೇ ಕೃಷಿ ಇಲಾಖೆ ಜಂಯಿ ನಿರ್ದೇಶಕರು, ಕೃಷಿ ಇಲಾಖೆ ಕಮೀಶ್ನರ್ ಸೇರಿದಂತೆ ಉನ್ನತಾಧಿಕಾರಿಗಳಿಗೆ ಮಾತನಾಡಿದ ಸಾಸಕರು, ವಿಮಾ ಕಂಪನಿಗಳ ತಕ್ಷಣ ಕಂತು ತುಬಿರುವ, ನೋಂದಣಿಯಾಗಿರುವ ರೈತರಿಗೆ ಮದ್ಯಂತರ ಪರಿಹಾರ ನೀಡಲೇಬೇಕು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ, ನಂತರ ಕ್ರಾಪ್ ಕಟಿಂಗ್ ಪ್ರಯೋಗದ ನಂತರ ಪರಿಹಾರದ ಅಂತಿಮ ಲೆಕ್ಕ ಹಾಕಿ ಹಣ ನೀಡಲೇಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಮುಂದಿನ 6 ತಿಂಗಳ ಕುಡಿಯುವ ನೀರಿನ ಬವಣೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು, ದಕ್ಷಿಣ ಮತಕ್ಷೇತ್ರದ ಎಲ್ಲಾ 28 ಹಳ್ಳಿಗಳಲ್ಲಿ ಕೊಳವೆ ಬಾವಿ ಅಗತ್ಯವಿದ್ದಲ್ಲಿ ಕೊರೆದು ಜನ, ಜಾನುವಾರು ನೀರಿನ ಬವಣೆ ನೀಗಿಸುವಂತೆ ಶಾಸಕರು ಸೂಚಿಸಿದರು.
ಮುಂದಿನ ದಿನಗಳಲ್ಲಿ ಜಾನುವಾರು ಮೇವು ಸಮಸ್ಯೆ ಕಾಡದಂತೆ ಅಗತ್ಯ ಕ್ರಮ ಜರುಗಿಸಬೇಕು. ಗೋಶಾಲೆಗಳನ್ನು ಎಲ್ಲೆಲ್ಲಿ ತೆರೆಯಬೇಕು ಎಂಬುದನ್ನು ಯೋಚಿಸಿ ಸಾಮಾನ್ಯ ಜ್ಞಾನ ಉಪಯೋಗಿಸಿ ಗೋಶಾಲೆ ಆರಂಭಿಸಬೇಕು, ಮೇವಿನ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ತಾಪಂ ಕಾರ್ಯನಿರ್ನಾಹಕ ಅಧಿಕಾರಿ ಮಾನಪ್ಪ ಕಟ್ಟೀಮನಿ, ಗ್ರೇಡ್ 2 ತಹಶೀಲ್ದಾರ್, ಕೃಷಿ, ಪಶು ಸಂಗೋಪನೆ, ಶಿಕ್ಷಣ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿದ್ದರು. ಸಭೆಗೆ ಗೈರಾದ ಕೆಲವರನ್ನು ಗುರುತಿಸಿ ಅವರಿಗೆ ಶೋಕಾಸ್ ನೋಟೀಸ್ ಕಳುಹಿಸಿ ಶಿಸ್ತು ಕ್ರಮ ಜರುಗಿಸುವಂತೆ ಶಾಸಕ ಅಲ್ಲಂಪ್ರಭು ಪಾಟೀಲ್ ಸೂಚಿಸಿದರು.






























