
ಧಾರವಾಡ, ಅ.೧೫: ಸಾಮಾನ್ಯವಾಗಿ ಎಲ್ಲ ಚುನಾವಣೆಯಲ್ಲಿ ಇವಿಎಂ ಗಳ ಬಳಕೆ ಆಗುತ್ತದೆ. ಕರ್ನಾಟಕ ಪಶ್ಚಿಮ ಪದವಿಧರರರ ಕ್ಷೇತ್ರದ ಚುನಾವಣೆಯು ಭಿನ್ನವಾಗಿದ್ದು, ಇವಿಎಂ ಯಂತ್ರದಲ್ಲಿ ಬಟನ್ ಒತ್ತುವ ಬದಲು, ಇಲ್ಲಿ ಮತದಾರರಿಗೆ ಬ್ಯಾಲೆಟ್ ಪೇಪರ್ ನೀಡಲಾಗುತ್ತದೆ. ಅದನ್ನು ಸರಿಯಾಗಿ ಭರ್ತಿ ಮಾಡಿ, ಬ್ಯಾಲೆಟ್ ಬಾಕ್ಸ್ನಲ್ಲಿ ಮತದಾರರು ಹಾಕಬೇಕು. ಈ ಸಂಪೂರ್ಣ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ವೀಕ್ಷಿಸಬೇಕು ಎಂದು ಚುನಾವಣಾ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಅವರು ನಗರದ ಕರ್ನಾಟಕ ಆಲೂರು ವೆಂಕಟರಾವ್ ಭವನದಲ್ಲಿ ಸೂಕ್ಷö್ಮ ವೀಕ್ಷಕರು, ಪಿಆರ್ಓ, ಎಪಿಆರ್ಓ ಅವರಿಗೆ ಆಯೋಜಿಸಿದ ಚುನಾವಣೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚುನಾವಣೆಯು ಅಕ್ಟೋಬರ್ ೨೩, ೨೦೨೬ ರಂದು ಬೆಳಗ್ಗೆ ೮ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ನಡೆಯುವುದರಿಂದ ಯಾವುದೇ ಕಾರಣಕ್ಕೂ ಚುನಾವಣಾ ಸಿಬ್ಬಂದಿಗಳು ಗೊಂದಲ ಮಾಡಿಕೊಳ್ಳಬಾರದು. ಯಾರೂ ಕೂಡ ನನಗೆ ಮಾಡಲು ಆಗಲ್ಲ ಅಥವಾ ಇಷ್ಟವಿಲ್ಲ ಎಂದು ಹೇಳದೇ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಅರ್ಜಿಗಳು, ದಾಖಲೆಗಳು ಮತ್ತು ಲಕೋಟೆಗಳನ್ನು ಕಳುಹಿಸುವಾಗ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದರು.
ಈ ತರಬೇತಿಯಲ್ಲಿ ಶಿಕ್ಷಕರು ಹಾಗೂ ಬ್ಯಾಂಕರ್ಗಳು ಭಾಗವಹಿಸಿದ್ದೀರಿ. ನೀವು ದೇಶದ ಭವಿಷ್ಯವನ್ನು ರೂಪಿಸುವ ಕಾರ್ಯ ಮಾಡುತ್ತಿದ್ದು, ಚುನಾವಣೆ ಕೆಲಸ ನಿಮಗೆ ಕಷ್ಟವೇನಲ್ಲ. ನಾವೆಲ್ಲರೂ ನಿಮಗೆ ಬೆಂಬಲವಾಗಿ ನಿಲ್ಲುತ್ತೇವೆ. ಆದ್ದರಿಂದ ಜಾಗರೂಕತೆಯಿಂದ ಕೆಲಸ ನಿರ್ವಹಿಸಿ ಎಂದು ಅವರು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು ೫೬ ಪೋಲಿಂಗ್ ಸ್ಟೇಷನ್ಗಳು (ಮತಗಟ್ಟೆಗಳು) ಮಾತ್ರ ಇರುವುದರಿಂದ ಎಲ್ಲಾ ಕೇಂದ್ರಗಳು ಉತ್ತಮವಾಗಿದ್ದು, ಸಿಬ್ಬಂದಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ. ನೀವುಗಳು ಜಾಗರೂಕತೆಯಿಂದ ಕೆಲಸ ನಿರ್ವಹಿಸಿ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಸುಮಾರು ೮,೦೦೦ ರಿಂದ ೯,೦೦೦ ಮತಗಳು ಅಸಿಂಧುವಾಗಿದ್ದವು . ಬ್ಯಾಲೆಟ್ ಪೇಪರ್ ಮೇಲೆ ಮತದಾರರು ತಮ್ಮ ಆದ್ಯತೆಯನ್ನು ೧, ೨, ೩ ಎಂದು ಸಂಖ್ಯೆಗಳಲ್ಲಿ (ಅಥವಾ ರೋಮನ್ ಅಂಕಿಗಳಲ್ಲಿ / ಕನ್ನಡ ಸಂಖ್ಯೆಗಳಲ್ಲಿ) ಮಾತ್ರ ಬರೆಯಬೇಕು. ಬ್ಯಾಲೆಟ್ ಪೇಪರ್ ಮೇಲೆ ಬೇರೆ ಯಾವುದೇ ರೀತಿಯ ಹೆಸರು, ‘oಟಿe’, ಅಥವಾ ಇನ್ಯಾವುದೇ ಬರಹಗಳನ್ನು ಬರೆಯುವಂತಿಲ್ಲ, ಹಾಗೆ ಬರೆದರೆ ಆ ಮತಗಳು ಅಸಿಂಧುಗೊಳ್ಳುತ್ತವೆ ಎಂದು ಅವರು ತಿಳಿಸಿದರು.
ಮತದಾನದ ಇಂಕ್ ಇಂಡೇಲಿಬಲ್ ಇಂಕ್ ಅನ್ನು ಎಡಗೈಯ ತೋರುಬೆರಳಿಗೆ ಮಾತ್ರ ಹಾಕಬೇಕು. ಎಲ್ಲರೂ ಎಚ್ಚರಿಕೆಯಿಂದ, ಜಾಗರೂಕತೆಯಿಂದ ಮತ್ತು ಪರಸ್ಪರ ಸಹಕಾರದೊಂದಿಗೆ ಈ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ತರಬೇತುದಾರರಿಗೆ ತರಬೇತಿ ಕುರಿತು ಮಾಹಿತಿ ನೀಡಿದರು.
ಜಿಲ್ಲಾಡಳಿತದಿಂದ ನೇಮಕಗೊಂಡಿರುವ ಮಾಸ್ಟರ್ ಟ್ರೆöÊನರ್ಗಳಾದ ರಾಘವೇಂದ್ರ ಬಡಿಗೇರ, ಭರತಕುಮಾರ ಚಂದನಕರ್, ಅರುಣ ನವಲೂರ, ಸೋಮು ಸಂತಿ, ನರಸಿಂಹಮೂರ್ತಿ ರಾಜೂರು ಅವರು ಚುನಾವಣೆ ಸಿಬ್ಬಂದಿಗಳಿಗೆ ಮೊದಲನೇ ಹಂತದ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಧಾರವಾಡ ತಹಶೀಲ್ದಾರ್ ಡಾ. ಡಿ.ಎಚ್.ಹೂಗಾರ, ಡಿಡಿಪಿಐ ಉಮೇಶ ಬೊಮ್ಮಕ್ಕನವರ, ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳಾದ ಪ್ರಭಾಕರ ಭಟ್, ಪ್ರವೀಣ ಹುಚ್ಚಣ್ಣನವರ, ರಾಜಶೇಖರಗೌಡ ಕಂಟೆಪ್ಪಗೌಡರ ಮಲ್ಲಿಕಾರ್ಜುನ ಸೊಲಗಿ, ರಮೇಶ ಪಾಯಣ್ಣವರ, ಪ್ರಜ್ವಲ್ ದೊಡ್ಡಮನಿ, ಸುನೀಲ ಸಾಲಗಟ್ಟಿ, ಮೋಹನ ಅಂಬಿಗೇರ, ಆಶಾಲತಾ ಹುಬ್ಬಳ್ಳಿ, ಸವಿತಾ ಬಳಗಾನೂರ, ಯಲ್ಲಪ್ಪ ಸವದತ್ತಿ ಸೇರಿದಂತೆ ತರಬೇತುದಾರರು ಉಪಸ್ಥಿತರಿದ್ದರು.























