
ಬೆಂಗಳೂರು: ಏ-೧೭-ಪಶ್ಚಿಮ ನಗರ ಪಾಲಿಕೆಯ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಅವರು ಇಂದು ಪದ್ಮನಾಭನಗರ ವಿಭಾಗದಲ್ಲಿ ವಿವಿಧ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.
ಪ್ರಸ್ತಾಪಿತ ಅಗಲೀಕರಣಗೊಂಡ ಇಟ್ಟಮಡು ರಸ್ತೆ, ವಾರ್ಡ್ ರಸ್ತೆಗಳ ಸ್ವಚ್ಛತೆ ಹಾಗೂ ಭಾರತ ಜನಗಣತಿ ೨೦೨೭ಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಅವರು ಸಮಗ್ರವಾಗಿ ಪರಿಶೀಲಿಸಿದರು. ಹೊಸಕೆರೆಹಳ್ಳಿ ವಾರ್ಡ್‌ನಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರೊಂದಿಗೆ ಬ್ಲಾಕ್‌ವಾರು ಮನೆಗಳಿಗೆ ಭೇಟಿ ನೀಡಿ, ಜನಗಣತಿ ಕಾರ್ಯಗಳ ಪ್ರಗತಿ ಮತ್ತು ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಉಪ ಆಯುಕ್ತ (ಆಡಳಿತ) ಸಾಯಿದಾ ಆಫ್ರಿನ್ ಭಾನು, ಅಧಿಕ್ಷಕ ಅಭಿಯಂತರ ಜಯಶಂಕರ್, ವಿಭಾಗದ ಕಾರ್ಯಪಾಲಕ ಅಭಿಯಂತರರು, ಕಂದಾಯಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಸ್ಥಳ ಪರಿಶೀಲನೆ ವೇಳೆ ಆಯುಕ್ತರು ರಸ್ತೆ ಅಗಲೀಕರಣ ಹಾಗೂ ಸ್ವಚ್ಛತಾ ಕಾರ್ಯಗಳನ್ನು ಇನ್ನಷ್ಟು ವೇಗವಾಗಿ ಮತ್ತು ಸಮರ್ಪಕವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜನಗಣತಿ ಕಾರ್ಯವನ್ನು ನಿರ್ವಿಘ್ನವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿದರು.






















