Home Lead News ಮಹಿಳಾ ಮೀಸಲಾತಿ ಮಸೂದೆಗೆ ಸೋಲು;ಎನ್ ಡಿಎಗೆ ಮುಖಭಂಗ

ಮಹಿಳಾ ಮೀಸಲಾತಿ ಮಸೂದೆಗೆ ಸೋಲು;ಎನ್ ಡಿಎಗೆ ಮುಖಭಂಗ

ನವದೆಹಲಿ, ಏ.17- ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲುಂಟಾಗಿದೆ. ಇದರಿಂದಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಭಾರೀ ಮುಖಭಂಗ ಅನುಭವಿಸಿದೆ.
ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಉದ್ದೇಶದಿಂದ ಮಹಿಳಾ ಮೀಸಲಾತಿ ಕಾಯ್ದೆಗೆ 131ನೇ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿತ್ತು. ಇದಕ್ಕಾಗಿ ಸಂಸತ್ತಿನ ವಿಶೇಷ ಅಧಿವೇಶನ ಕರೆದಿತ್ತು. ಆದರೆ ಮೂರನೇ ಎರಡರಷ್ಟು ಬಹುಮತ ಸಿಗದೆ ನಿರೀಕ್ಷೆಯಂತೆ ಮಸೂದೆಗೆ ಸೋಲಾಗಿದೆ.


ಮಸೂದೆ ಅಂಗೀಕರಿಸಲು ಸರ್ಕಾರಕ್ಕೆ 328 ಮತಗಳ ಅವಶ್ಯಕತೆಯಿತ್ತು. ಮಸೂದೆ ಪರವಾಗಿ 298 ಮತಗಳು ಬಂದರೆ, ಮಸೂದೆ ವಿರುದ್ಧ 230 ಮತಗಳು ಬಂದಿವೆ ಎಂದು ಲೋಕಾಭಾದ್ಯಕ್ಷ ಓ ಬಿರ್ಲಾ ಪ್ರಕಟಿಸಿದರು.


ಒಟ್ಟು 543 ಸದಸ್ಯ ಬಲದ ಲೋಕಸಭೆಯಲ್ಲಿ 489 ಸದಸ್ಯರು ಮತಚಾಲಾಯಿಸಿದ್ದರು. 48 ಮತಗಳ ಕೊರತೆಯಿಂದಾಗಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಸೋತಿದೆ.
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಸೇರಿದಂತೆ ಮೂರು ಪ್ರಮುಖ ಮಸೂದೆಗಳನ್ನು ಜಾರಿಗೆ ತಂದಿವೆ ಎಂದು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದವು.


ವಿರೋಧ ಪಕ್ಷಗಳ ಆರೋಪಗಳಿಗೆ ಕೇಂದ್ರ ಸರ್ಕಾರ ತಿರುಗೇಟು ನೀಡಿ ಮಸೂದೆ ಮಂಡನೆಯನ್ನು ಬಲವಾಗಿ ಸಮರ್ಥಿಸಿಕೊಂಡಿತ್ತು. ಆದರೆ ಸುದೀರ್ಘ ಚರ್ಚೆಯ ಬಳಿಕ ಲೋಕಸಭಾದ್ಯಕ್ಷರು ಮತಕ್ಕೆ ಹಾಕಿದ ಬಳಿಕ ಮೂರನೇ ಎರಡರಷ್ಟು ಬೆಂಬಲ ಪಡೆಯಲು ಕೇಂದ್ರ ಸರ್ಕಾರ ವಿಫಲವಾಗಿದ್ದು ಮಸೂದೆಗೆ ಸೋಲುಂಟಾಗಿದೆ.


ಪ್ರತಿಪಕ್ಷಗಳ ಹಠಮಾರಿ ಧೋರಣೆಯಿಂಸಾಗಿ ಮಸೂದೆ ಸೋಲಲು ಕಾರಣ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಕಿಡಿಕಾರಿದ್ದಾರೆ‌.


ಮಸೂದೆ ಪರಾಭವಗೊಳ್ಳುತ್ತಿದ್ದಂತೆ ಸಂಸತ್ತಿನ ಹೊರಗೆ ಎನ್ ಡಿಎ ಸದಸ್ಯರು ಪ್ರತಿಭಟನೆ ನಡೆಸಿ ವಿಪಕ್ಷಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ಮಾಡಿಯೇ ತೀರುತ್ತೇವೆ ಅಂತ ಎನ್‌ಡಿಎ ಸಂಸದರು ಪಣ ತೊಟ್ಟಿದ್ದಾರೆ.