
ಚಿತ್ತಾಪುರ; ದಸರಾ ಉತ್ಸವದ ಅಂಗವಾಗಿ ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರಕೂಟರ ಕುಲದೇವತೆ ಎಂದೇ ಖ್ಯಾತಿ ಪಡೆದ ನಾಗಾವಿ ಯಲ್ಲಮ್ಮನ ದೇವಸ್ಥಾನಕ್ಕೆ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ. ದೇವಿಯ ದರ್ಶನ ಪಡೆಯಲು ವಿವಿಧ ರಾಜ್ಯ, ಜಿಲ್ಲೆ ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಆದರೆ, ಭಕ್ತರ ಸಂಖ್ಯೆಗೆ ತಕ್ಕಂತೆ ಬಸ್ಗಳ ವ್ಯವಸ್ಥೆ ಇಲ್ಲದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದಸರಾ ಉತ್ಸವ ಎಂದರೆ ಭಕ್ತರ ದಟ್ಟಣೆ ಹೆಚ್ಚಾಗುವುದು ಗೊತ್ತಿರುವ ವಿಚಾರವೇ. ಆದರೂ, ಇಂತಹ ಸಂದರ್ಭದಲ್ಲಿ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಒಂದೆಡೆ ದೇವಿಯ ದರ್ಶನದ ಕಾತರ, ಮತ್ತೊಂದೆಡೆ ಬಸ್ಗಳಿಗಾಗಿ ಕಾಯುವ ಸಂಕಷ್ಟ ಎದುರಿಸುವಂತಾಗಿದೆ.
ಹಬ್ಬದ ಸಂಭ್ರಮದಲ್ಲಿ ದೇವಿಯ ದರ್ಶನಕ್ಕೆಂದು ಆಗಮಿಸುವ ಭಕ್ತರು ಸಮರ್ಪಕ ಸಾರಿಗೆ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುವಂತಾಗಿರುವುದು ವಿಷಾದನೀಯ. ವಿಶೇಷವಾಗಿ ಮಹಿಳೆಯರು, ವೃದ್ಧರು ಮತ್ತು ಮಕ್ಕಳಿಗೆ ಬಸ್ಗಳ ಕೊರತೆ ಮತ್ತಷ್ಟು ಸಮಸ್ಯೆ ತಂದೊಡ್ಡುವ ಸಾಧ್ಯತೆಯಿದೆ.
ಪ್ರತಿವರ್ಷದಂತೆ ಈ ಬಾರಿಯೂ ದಸರಾ ಉತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇರುವಾಗ, ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್ಗಳನ್ನು ನಿಯೋಜಿಸುವುದು ಸಾರಿಗೆ ಇಲಾಖೆಯ ಜವಾಬ್ದಾರಿಯಲ್ಲವೇ?
ಭಕ್ತರ ಸಂಕಷ್ಟಕ್ಕೆ ಕೊನೆ ಯಾವಾಗ?
ನಾಗಾವಿ ಯಲ್ಲಮ್ಮನ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸುಗಮ ಪ್ರಯಾಣದ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು. ಜನದಟ್ಟಣೆ ಇರುವ ಸಮಯದಲ್ಲಿ ಹೆಚ್ಚುವರಿ ಬಸ್ಗಳನ್ನು ಓಡಿಸಿ, ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು.
ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಸಾರಿಗೆ ಸಂಕಷ್ಟವೇ ಎದುರಾದರೆ, ಉತ್ಸವದ ವ್ಯವಸ್ಥೆಗಳ ಪ್ರಯೋಜನವಾದರೂ ಏನು? ಎಂಬುವಂತಾಗಿದೆ.
ಭಕ್ತರ ಸಮಸ್ಯೆಯನ್ನು ಅಧಿಕಾರಿಗಳು ಪರಿಗಣಿಸಿ, ತಕ್ಷಣ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ಲದಿದ್ದರೆ, ದಸರಾ ಉತ್ಸವದ ಸಂಭ್ರಮದ ನಡುವೆಯೂ ಇದೇ ಅ.26ರಂದು ನಾಗಾವಿ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಇರುವುದರಿಂದ ಭಕ್ತರು ಸಾರಿಗೆ ಅವ್ಯವಸ್ಥೆಯ ಸಂಕಷ್ಟ ಅನುಭವಿಸುವುದು ತಪ್ಪದು.
ನರಹರಿ ಕುಲಕರ್ಣಿ ಕರವೇ ತಾಲೂಕು ಅಧ್ಯಕ್ಷರು ಚಿತ್ತಾಪುರ.























