
ಜಮಖಂಡಿ.ಜು. 19:ಜಮಖಂಡಿ ನಗರದ ಹೊರವಲಯದ ಕಡಕೋಳ ಪಿ.ಕೆ. ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ 16 ವರ್ಷದ ಯುವಕನ ಎಡಗೈ ಮೊಣಕೈ ಭಾಗದಿಂದ ಸಂಪೂರ್ಣವಾಗಿ ತುಂಡಾಗಿರುವ ಘಟನೆ ನಡೆದಿದೆ.
ರಬಕವಿ-ಬನಹಟ್ಟಿ ಮೂಲದ ರೋಹನ್ ವಾಗ್ಮೋರೆ ಸೇರಿದಂತೆ ಮೂವರು ಸ್ನೇಹಿತರು ಕಾರಿನಲ್ಲಿ ರಬಕವಿಯಿಂದ ಜಮಖಂಡಿ ಮಾರ್ಗವಾಗಿ ಸಾವಳಗಿ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿದ್ದ ಕಬ್ಬಿಣದ ಡಿವೈಡರ್‍ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಡಿವೈಡರ್ ಕಾರಿನ ಮುಂಭಾಗವನ್ನು ಸೀಳಿ ಒಳಭಾಗಕ್ಕೆ ನುಗ್ಗಿದ್ದು, ಈ ವೇಳೆ ಕಾರಿನಲ್ಲಿದ್ದ ರೋಹನ್‍ನ ಎಡಗೈ ಮೊಣಕೈ ಭಾಗದಿಂದ ಸಂಪೂರ್ಣವಾಗಿ ತುಂಡಾಗಿದೆ.ಅಪಘಾತದ ತೀವ್ರತೆ ಭೀಕರವಾಗಿದ್ದರೂ, ಕಾರಿನಲ್ಲಿದ್ದ ಮೂವರು ಯುವಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ 108 ಆಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ಸ್ನೇಹಿತರು ತುಂಡಾದ ಕೈಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿಕೊಂಡು ಗಾಯಾಳುವನ್ನು ಜಮಖಂಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ತಕ್ಷಣ ರಕ್ತಸ್ರಾವ ನಿಯಂತ್ರಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಿದರು.
ಬಳಿಕ ಗಾಯಾಳುವಿನ ಪೆÇೀಷಕರು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿನ ತಜ್ಞ ವೈದ್ಯರ ಸಲಹೆ ಮೇರೆಗೆ ಮಹಾರಾಷ್ಟ್ರದ ಮಿರಜ್ ನಗರದ ವಿಶೇಷ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ತುಂಡಾದ ಕೈಯನ್ನು ಮರುಜೋಡಣೆ ಮಾಡುವ ಸಾಧ್ಯತೆ ಕುರಿತು ತಜ್ಞ ವೈದ್ಯರು ಪರಿಶೀಲನೆ ನಡೆಸುತ್ತಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.ಅಪಘಾತದ ಕುರಿತು ಜಮಖಂಡಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.
ತುಂಡಾದ ಅಂಗವನ್ನು ಆದಷ್ಟು ಬೇಗ ಮರುಜೋಡಣೆ ಮಾಡಬೇಕು
ತಾಲೂಕು ಆರೋಗ್ಯಾಧಿಕಾರಿ ಡಾ. ಜಿ.ಎಸ್. ಗಲಗಲಿ ಮಾತನಾಡಿ, “ತುಂಡಾದ ಅಂಗವನ್ನು ಮರುಜೋಡಣೆ ಮಾಡಲು ಅತ್ಯಂತ ಕಡಿಮೆ ಸಮಯದಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಗತ್ಯ. ಹೆಚ್ಚು ಸಮಯ ಕಳೆದರೆ ಅಂಗದಲ್ಲಿರುವ ರಕ್ತನಾಳಗಳು ಹಾಗೂ ಜೀವಕೋಶಗಳು ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೂ ತಜ್ಞ ವೈದ್ಯರು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಸದ್ಯ ರೋಹನ್ ವಾಗ್ಮೋರೆ ಪ್ರಾಣಾಪಾಯದಿಂದ ಪಾರಾಗಿದ್ದು, ಮಿರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವೈದ್ಯರ ಮುಂದಿನ ಚಿಕಿತ್ಸೆಯ ಫಲಿತಾಂಶದ ಮೇಲೆ ಕೈ ಮರುಜೋಡಣೆಯ ಸಾಧ್ಯತೆ ನಿರ್ಧಾರವಾಗಲಿದೆ.































