
ಯಾದಗಿರಿ,ಏ.೧೭-ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಸಮೀಪ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ೬ ಮಂದಿ ದುರಂತವಾಗಿ ಸಾವನ್ನಪ್ಪಿದ ಘಟನೆ ಆತಂಕ ಮೂಡಿಸಿದೆ. ವಿಆರ್‌ಎಲ್ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲಿ ಎರಡೂ ವಾಹನಗಳಿಗೆ ಬೆಂಕಿ ತಗುಲಿ ಭಾರೀ ಅನಾಹುತ ಸಂಭವಿಸಿದೆ.
ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸ್ಥಳದಲ್ಲೇ ಸಜೀವ ದಹನಗೊಂಡಿದ್ದು, ಗುರುತಿಸಲು ಸಹ ಸಾಧ್ಯವಾಗದ ಸ್ಥಿತಿಗೆ ದೇಹಗಳು ಕರಕಲಾಗಿದೆ ಎಂದು ತಿಳಿದುಬಂದಿದೆ. ಬಸ್ ಕೂಡ ಬೆಂಕಿಗಾಹುತಿಯಾಗಿದ್ದು, ಪ್ರಯಾಣಿಕರಲ್ಲಿ ಭೀತಿಯ ವಾತಾವರಣ ಉಂಟಾಯಿತು.
ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಸ್ಥಳೀಯರು ಸಹ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದರು. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ವೇಗ, ನಿರ್ಲಕ್ಷ್ಯ ಚಾಲನೆ ಅಥವಾ ತಾಂತ್ರಿಕ ದೋಷವೇ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.























