
ಬೆಂಗಳೂರು, ಏ. ೧೭- ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತಿದ್ದರೂ ಮುಖ್ಯಮಂತ್ರಿಗಳು ಅಸಹಾಯಕರಂತೆ ಇರುವುದಕ್ಕೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರುಗಳು, ಸಚಿವರುಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಇಷ್ಟಾದರೂ ಮುಖ್ಯಮಂತ್ರಿಗಳು ಸುಮ್ಮನಿರುವುದು ಬೇಸರ ತರಿಸಿದೆ ಎಂದು ಹೇಳಿದರು.
ಇತ್ತೀಚೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಜೀರ್ ಅಹಮದ್ ಅವರನ್ನು ವಜಾ ಮಾಡಲಾಗಿತ್ತು. ಹಾಗೆಯೇ ವಿಧಾನಪರಿಷತ್ ಸದಸ್ಯರಾಗಿದ್ದ ಜಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದ ಆರೋಪದ ಮೇಲೆ ಇವರುಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿತ್ತು.
ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವಂತೆ ಹೈಕಮಾಂಡ್ ಮೇಲೆ ಒತ್ತಡಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆಪ್ತ ಬಳಗದಲ್ಲೇ ಗುರುತಿಸಿಕೊಂಡಿರುವ ಕೆಲ ಶಾಸಕರು, ಸಚಿವರುಗಳು ಇಷ್ಟೆಲ್ಲಾ ಆಗುತ್ತಿದ್ದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತ್ರ ಮೌನವಾಗಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗಿದೆ.























