
ನವದೆಹಲಿ ಏ. ೧೭- ದೇಶದಲ್ಲಿ ಮಹಿಳೆಯರ ರಾಜಕೀಯ ಪ್ರತಿನಿಧಿತ್ವವನ್ನು ಹೆಚ್ಚಿಸಲು ಉದ್ದೇಶಿಸಿದ ಮಹಿಳಾ ಮೀಸಲು ಕಾಯ್ದೆ ೨೦೨೩ (ನಾರಿ ಶಕ್ತಿ ವಂದನ ಅಧಿನಿಯಮ) ಏಪ್ರಿಲ್ ೧೬ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.
ಸಂಸತ್ ನಲ್ಲಿ ಈ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ಸೇರಿಸುವ ಸಂಬಂಧ ಚರ್ಚೆಯಾಗುತ್ತಿದ್ದು, ಕಾನೂನು ಜಾರಿಯಾಗದ ಹೊರತು ತಿದ್ದುಪಡಿ ತರಲು ಸಾಧ್ಯವಿಲ್ಲ. ಹೀಗಾಗಿ ಕಾಯ್ದೆಯನ್ನು ನಿನ್ನೆಯಿಂದಲೇ ಜಾರಿ ಮಾಡಿ, ಕಾನೂನು ಸಚಿವಾಲಯದಿಂದ ಆದೇಶ ಹೊರಡಿಸಲಾಗಿದೆ.
ಸಂವಿಧಾನಕ್ಕೆ ತಿದ್ದುಪಡಿ ತಂದು ಮಸೂದೆಯೂ ಕಾನೂನುನಾಗಿ ರೂಪುಗೊಂಡಿದ್ದರೂ ಸರ್ಕಾರ ಜಾರಿ ತರದಿದ್ದರಿಂದ ಅದು ಸಂವಿಧಾನಕ ಭಾಗವಾಗಿರಲಿಲ್ಲ. ಕಾನೂನು ಜಾರಿಗೆ ಬರದಿದ್ದರೆ ತಿದ್ದುಪಡಿ ತರಲು ಸಾಧ್ಯವಿಲ್ಲ. ಹೀಗಾಗಿ ಏ. ೧೬ ರಿಂದ ಜಾರಿಗೆ ಬರುವಂತೆ ಮಹಿಳಾ ಮೀಸಲಾತಿ ಕಾನೂನನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಕಾನೂನು ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಈ ಕಾಯ್ದೆಯಡಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ೩೩ ಶೇಕಡಾ ಮೀಸಲಾತಿ ಕಲ್ಪಿಸುವ ವ್ಯವಸ್ಥೆ ಇದೆ. ಆದರೆ, ಕಾಯ್ದೆ ಜಾರಿಗೆ ಬಂದಿದ್ದರೂ ಕೂಡ ತಕ್ಷಣದಿಂದಲೇ ಈ ಮೀಸಲಾತಿ ಅನುಷ್ಠಾನವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ತಕ್ಷಣ ಅನುಷ್ಠಾನ ಸಾಧ್ಯವಿಲ್ಲ ಯಾಕೆ?
ಪ್ರಸ್ತುತ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಅವಧಿಯಲ್ಲಿ ಈ ಮೀಸಲು ಅನ್ವಯವಾಗುವುದಿಲ್ಲ. ಕಾರಣ, ಈ ವ್ಯವಸ್ಥೆಯನ್ನು ಜಾರಿಗೆ ತರಲು ಮೊದಲು ದೇಶದ ಮುಂದಿನ ಜನಗಣತಿ ಪೂರ್ಣಗೊಳ್ಳಬೇಕು. ಅದರ ನಂತರ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ನಡೆಯಬೇಕಿದೆ.ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೇ ಮಹಿಳಾ ಮೀಸಲು ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲ ಕಾಯ್ದೆಯ ಪ್ರಕಾರ, ಮಹಿಳಾ ಮೀಸಲು ಅನುಷ್ಠಾನವು ೨೦೩೪ರ ನಂತರ ಮಾತ್ರ ಸಾಧ್ಯವಾಗುವ ಸಾಧ್ಯತೆ ಇದೆ. ಆದರೆ, ಕೇಂದ್ರ ಸರ್ಕಾರ ೨೦೨೯ರೊಳಗೆ ಇದನ್ನು ಜಾರಿಗೆ ತರಲು ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದೆ.
ಈ ಕುರಿತು ಸಂಸತ್ತಿನಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಮೀಸಲು ಜಾರಿಗೆ ತರುವ ಅವಧಿಯನ್ನು ಮುಂಚಿತಗೊಳಿಸುವ ಬಗ್ಗೆ ಸರ್ಕಾರ ಪ್ರಯತ್ನಿಸುತ್ತಿದೆ.
ಕಾಯ್ದೆ ಜಾರಿಗೆ ಬಂದಿದ್ದರೂ ಕೂಡ, ಪ್ರಸ್ತುತ ವಿಧಾನಮಂಡಳಗಳ ರಚನೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಅಗತ್ಯವಾದ ಆಡಳಿತಾತ್ಮಕ ಹಾಗೂ ಸಂವಿಧಾನಾತ್ಮಕ ಕ್ರಮಗಳು ಪೂರ್ಣಗೊಂಡ ನಂತರವೇ ಮಹಿಳಾ ಮೀಸಲು ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ
ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಅನುಷ್ಠಾನ ಸಂಬಂಧ ಸಂಜೆ ೪ ಗಂಟೆಗೆ ಮತದಾನ ನಡೆಯಲಿದ್ದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ಭಿನ್ನಾಭಿಪ್ರಾಯದ ನಡುವೆ ಮಹಿಳಾ ಮೀಸಲಾತಿಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ದೇಶದಲ್ಲಿ ೨೦೨೯ ರಿಂದ ಮಹಿಳಾ ಮೀಸಲಾತಿ ಜಾರಿಗೆ ತರಲು ಕಾನೂನು ತಿದ್ದುಪಡಿ ಮಾಡಲು ಸಂಸತ್ತಿನಲ್ಲಿ ಚರ್ಚೆ ನಡುವೆ ೨೦೨೩ ರ ಕಾಯ್ದೆಯ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ ಮಹತ್ವ ಪಡೆದುಕೊಂಡಿದೆ.
ಮುಂದಿನ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಮಹಿಳೆಯರಿಗೆ ಮೀಸಲಾತಿ ಜಾರಿಗೆ ತರಬಹುದು ಎಂದು ಹೇಳಲಾಗಿದೆ.
ಅಧಿಸೂಚನೆಯಲ್ಲಿ “ಸಂವಿಧಾನದ ನೂರ ಆರನೇ ತಿದ್ದುಪಡಿ ಕಾಯ್ದೆ, ೨೦೨೩ ರ ಸೆಕ್ಷನ್ ೧ ರ ಉಪ-ವಿಭಾಗ (೨) ರ ಮೂಲಕ ಮಹಿಳಾ ಮೀಸಲು ಕಾಯ್ದೆ ಜಾರಿಗೆ ಬರಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
೨೦೨೩ರ ಸೆಪ್ಟೆಂಬರ್ ನಲ್ಲಿ, ಸಂಸತ್ತು ’ನಾರಿ ಶಕ್ತಿ ವಂದನ ಅಧಿನಿಯಮ ಅಂಗೀಕರಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಮಹಿಳಾ ಮೀಸಲಾತಿ ಕಾಯ್ದೆ ಎಂದು ಕರೆಯಲಾಗುತ್ತದೆ, ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ.
ಈ ಕಾಯ್ದೆಯು ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡಲು ಅವಕಾಶ ಮಾಡಿಕೊಟ್ಟಿದೆ.
೨೦೨೩ ರ ಕಾನೂನಿನಡಿಯಲ್ಲಿ, ೨೦೩೪ ರ ಮೊದಲು ಮೀಸಲಾತಿ ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ, ಏಕೆಂದರೆ ಇದು ೨೦೨೭ ರ ಜನಗಣತಿಯ ನಂತರದ ಕ್ಷೇತ್ರ ಪುನರ್ ವಿಂಗಡಣೆಗೆ ಜಾರಿ ಮಾಡುವ ಸಾಧ್ಯತೆ ಇದೆ.
ಲೋಕಸಭೆಯಲ್ಲಿ ಪ್ರಸ್ತುತ ಚರ್ಚೆಯಾಗುತ್ತಿರುವ ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರ ೨೦೨೯ ರಲ್ಲಿ ಮಹಿಳಾ ಕೋಟಾವನ್ನು ಜಾರಿಗೆ ತರುವ ಉದ್ದೇಶ ಹೊಂದಿದೆ.
ಜನಗಣತಿ ನಡೆಸದೆ ದೇಶದಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲು ಕಾಯ್ದೆ ಜಾರಿ ತರುವುದನ್ನು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಗದ್ದಲ ಕೋಲಾಹಲ ನಡೆದಿದೆ.
- ದೇಶದಲ್ಲಿ ಮಹಿಳಾ ಮೀಸಲು ಮಸೂದೆ ಜಾರಿ ಹಿನ್ನೆಲೆ
- ಲೋಕಸಭೆಯಲ್ಲಿ ವಿಸ್ತೃತ ಚರ್ಚೆ ಮುಂದುವರಿಕೆ
- ಸಂಜೆ ನಾಲ್ಕು ಗಂಟೆಗೆ ಮತದಾನ ನಿರೀಕ್ಷೆ
- ಈ ನಡುವೆ ಮಸೂದೆ ಜಾರಿ ಸಂಬಂಧ ಕೇಂದ್ರ ಕಾನೂನು ಸಚಿವಾಲಯದಿಂದ ಅಧಿಸೂಚನೆ
- ೨೦೨೯ ರಲ್ಲಿ ಮಸೂದೆ ಜಾರಿಗೆ ಪ್ರಯತ್ನ
- ಮಹಿಳಾ ಮೀಸಲಾತಿ ಜಾರಿ ಸಂಬಂಧ ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರ ನಡುವೆ ಆರೋಪ -ಪ್ರತ್ಯಾರೋಪ





















