
ಗುಬ್ಬಿ, ಜೂ. ೧೩– ಲಿಂಕ್ ಕೆನಾಲ್ ಕುರಿತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಸಮಿತಿ ವತಿಯಿಂದ ಸಭೆ ನಡೆಸಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿ ನಡೆಸಲಾಯಿತು.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ತಾಲ್ಲೂಕಿನ ಸುಂಕಪುರದ ಬಳಿಯಿಂದ ನಿರ್ಮಿಸಲು ಉದ್ದೇಶಿಸಿರುವ ಲಿಂಕ್ ಕೆನಾಲ್ ಕಾಮಗಾರಿಗೆ ಅಗತ್ಯ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸರ್ಕಾರದ ಭಾಗವಾಗಿ ಕಾಮಗಾರಿಯನ್ನು ಮಾಡಲೇಬೇಕಾಗುತ್ತದೆ ಎಂದು ಹೇಳಿದ್ದರು. ಪರಮೇಶ್ವರ್ ಅವರು ಮೊದಲು ಜಿಲ್ಲೆಯ ಮಗನಾಗಿ ಯೋಚಿಸಲಿ. ಜಿಲ್ಲೆಯ ಹಿತ ಕಡೆಗಣಿಸಿ ಅಗತ್ಯವಿಲ್ಲದಿದ್ದರೂ ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಮುಂದಾಗಿರುವುದು ಖಂಡನೀಯ. ಜಿಲ್ಲೆಯ ಸಾಧಕ?ಬಾಧಕಗಳನ್ನು ಅರಿತಿರುವ ಉಪಮುಖ್ಯಮಂತ್ರಿ ಜಿಲ್ಲೆಯ ಹಿತ ಕಡೆಗಣಿಸಬಾರದು ಎಂದು ಪ್ರತಿಭಟನಕಾರರು ಹೇಳಿದರು.
ಕುಣಿಗಲ್ ಭಾಗಕ್ಕೆ ನೀರು ತೆಗೆದುಕೊಂಡು ಹೋಗಲು ಯಾವುದೇ ತಕರಾರು ಇಲ್ಲ. ಈಗಾಗಲೇ ವಿಸ್ತರಣೆಗೊಂಡಿರುವ ನಾಲೆಯಲ್ಲಿ ನೀರು ತೆಗೆದುಕೊಂಡು ಹೋದಲ್ಲಿ ಎಲ್ಲರಿಗೂ ಅನುಕೂಲವಾಗುವುದು. ಪ್ರತ್ಯೇಕ ಪೈಪ್‌ಲೈನ್ ಮೂಲಕ ತೆಗೆದುಕೊಂಡು ಹೋಗುವ ಉದ್ದೇಶ ಏನು? ರೈತರನ್ನು ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬಾರದು. ಎಲ್ಲಾ ರೈತರ ಸಭೆ ಸೇರಿಸಿ ಚರ್ಚೆ ನಡೆಸಲಿ. ಏಕಾಏಕಿ ಕಾಮಗಾರಿ ನಡೆಸಲು ಮುಂದಾಗುತ್ತಿರುವುದು ಸರಿಯಲ್ಲ ಎಂದರು.
ತಾಲ್ಲೂಕಿನ ರೈತರ ಹಿತದೃಷ್ಟಿಯಿಂದ ಯಾವುದೇ ಹೋರಾಟಕ್ಕೆ ಸಿದ್ಧ. ಇದರಲ್ಲಿ ಯಾವುದೇ ರಾಜಕೀಯದ ಉದ್ದೇಶ ಇಲ್ಲ. ಹೇಮಾವತಿ ತಾಲ್ಲೂಕಿನ ಜನರ ಜೀವನಾಡಿ. ಹೇಮಾವತಿ ನಾಲೆಯ ನೀರಿನಿಂದಲೇ ಬದುಕು ಕಟ್ಟಿಕೊಂಡಿರುವ ಇಲ್ಲಿನ ರೈತರು ನೀರು ಇಲ್ಲವಾದಲ್ಲಿ ಗುಳೆ ಹೋಗಬೇಕಾಗುತ್ತದೆ. ಕುಣಿಗಲ್ ಶಾಸಕರು ಲಿಂಕ್ ಕೆನಾಲ್ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ರೈತರ ಹಿತದೃಷ್ಟಿಯಿಂದ ಪರಿಗಣಿಸಬೇಕು ಎಂದು ಹೋರಾಟಗಾರರು ಮನವಿ ಮಾಡಿದರು.
ಶಾಸಕ ಎಸ್.ಆರ್. ಶ್ರೀನಿವಾಸ್ ಅವರು, ಸಂಪರ್ಕ ಕಾಲುವೆಗೆ ನನ್ನ ವಿರೋಧವಿದೆ ಎಂದು ಹೇಳಿರುವುದು ಉತ್ತಮ ಬೆಳವಣಿಗೆ. ಅದು ಕೇವಲ ಮಾತಿಗೆ ಸೀಮಿತವಾಗದೆ, ಹೋರಾಟದಲ್ಲೂ ತೊಡಗಿಸಿಕೊಂಡಲ್ಲಿ ತಾಲ್ಲೂಕಿನ ಜನರಿಗೆ ಅನುಕೂಲವಾಗುವುದು ಎಂದು ಹೇಳಿದರು.
ಸಭೆಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ. ಗೋವಿಂದರಾಜು, ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ ಹಾಗೂ ಎಸ್.ಡಿ. ದಿಲೀಪ್ ಕುಮಾರ್, ಬಿ.ಎಸ್. ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಚಂದ್ರಶೇಖರ ಬಾಬು, ಹೊನ್ನಗಿರಿಗೌಡ, ಎಚ್.ಟಿ. ಭೈರಪ್ಪ, ಸುರೇಶ್ಡಗೌಡ, ಬಲರಾಮಯ್ಯ, ಶಂಕರ್‌ಕುಮಾರ್, ಲೋಕೇಶ್, ಚಂದ್ರಶೇಖರ್, ಮಹೇಶ್, ರೈತ ಸಂಘದ ಲೋಕೇಶ್, ಪದಾಧಿಕಾರಿಗಳು, ರೈತರು ಭಾಗವಹಿಸಿದ್ದರು.




























