
ಬೆಂಗಳೂರು, ಆ. ೧೬- ಬೆಂಗಳೂರು-ಮೈಸೂರು ಕಾರಿಡಾರ್ (ನೈಸ್) ಯೋಜನೆಯನ್ನು ಕೂಡಲೇ ವಶಕ್ಕೆ ಪಡೆದು ಟೋಲ್ ಸಂಗ್ರಹವನ್ನು ನಿಷೇಧಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಪತ್ರ ಬರೆದಿರುವ ಅವರು, ನೈಸ್ ಯೋಜನೆ ದೊಡ್ಡ ಹಗರಣ ಎಂದೆಲ್ಲಾ ನ್ಯಾಯಾಲಯ ಆದೇಶ ನೀಡಿದೆ. ಸರ್ಕಾರ ನ್ಯಾಯಾಲಯದ ಆದೇಶದ ಕಡೆ ಗಮನ ಹರಿಸುತ್ತಿಲ್ಲ. ನ್ಯಾಯಾಲಯದ ಆದೇಶ ಹಾಗೂ ಸಚಿವ ಸಂಪುಟ ಉಪಸಮಿತಿಯ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ನೈಸ್ ಯೋಜನೆಯನ್ನು ಸರ್ಕಾರ ವಶಕ್ಕೆ ಪಡೆದು ಟೋಲ್ ಸಂಗ್ರಹವನ್ನು ತತ್‌ಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಅವರು ತಿಳಿಸಿದ್ದಾರೆ.
ನೈಸ್ ಸಂಸ್ಥೆ ಯಾವ ರೀತಿ ನೆಲದ ಕಾನೂನು ಹಾಗೂ ಫ್ರೇಮ್ ವರ್ಕ್ ಅಗ್ರಿಮೆಂಟ್ ಉಲ್ಲಂಘಿಸಿದೆ ಎಂಬ ಬಗ್ಗೆ ಸವಿವರವಾಗಿ ಪತ್ರದಲ್ಲಿ ಪ್ರಸ್ತಾಪಿಸಿರುವ ಕುಮಾರಸ್ವಾಮಿ ಅವರು, ಈ ಯೋಜನೆಗೆ ಭೂಸ್ವಾಧೀನಪಡಿಸಿಕೊಂಡು ೨೩ ವರ್ಷಗಳು ಕಳೆದರೂ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ. ಅವರೆಲ್ಲಾ ಬೀದಿ ಪಾಲಾಗಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಹೈಕೋರ್ಟ್, ಸುಪ್ರೀಂ ಕೋರ್ಟ್ ನಿರ್ದೇಶನಗಳು ವಿಧಾನಸಭೆಯ ಸದನ ಸಮಿತಿ ಮತ್ತು ಸಚಿವ ಸಂಪುಟದ ಉಪಸಮಿತಿಯ ಶಿಫಾರಸ್ಸುಗಳು ಎಲ್ಲವನ್ನೂ ಪತ್ರದಲ್ಲಿ ಪ್ರಸ್ತಾಪಿಸಿರುವ ಕುಮಾರಸ್ವಾಮಿ ಅವರು, ನೈಸ್ ಸಂಸ್ಥೆ ನಿಬಂಧನೆ ಮತ್ತು ಷರತ್ತುಗಳನ್ನು ಉಲ್ಲಂಘಿಸಿದೆ. ಹಾಗಾಗಿ ರಾಜ್ಯ ಸರ್ಕಾರ ಒಂದು ಶಾಸನ ರಚಿಸಿ ನೈಸ್ ರಸ್ತೆ ಯೋಜನೆಯನ್ನು ವಶಕ್ಕೆ ತೆಗೆದುಕೊಳ್ಳಬೇಕು. ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾನೂನಿನಂತೆ ನಡೆಯತ್ತೇವೆ: ಡಿಕೆಶಿ
ನೈಸ್ ಯೋಜನೆಗೆ ಸಂಬಂಧಿಸಿದಂತೆ ಕಾನೂನು ಏನು ಹೇಳುತ್ತಿದೆಯೋ ಹಾಗೆ ನಾವು ನಡೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನೈಸ್ ಯೋಜನೆಯನ್ನು ವಶಪಡಿಸಿಕೊಳ್ಳುವಂತೆ ಆಗ್ರಹಿಸಿ ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ರ ಬರೆದಿರುವುದು ನಿಜ. ಪತ್ರ ಇನ್ನೂ ಓದಿಲ್ಲ. ಅದನ್ನು ಓದಿ ವಿಚಾರ ತಿಳಿದು ಕಾನೂನಿನ ಚೌಕಟ್ಟಿನಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆ ಪರಿಶೀಲಿಸುತ್ತೇನೆ. ಕಾನೂನಿನಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.




























