Home ಜಿಲ್ಲೆ ಕಲಬುರಗಿ ವಿದ್ಯುತ್ ಸ್ಪರ್ಶಿಸಿ ಗ್ರೂಪ್ ನೌಕರ ದುರ್ಮರಣ

ವಿದ್ಯುತ್ ಸ್ಪರ್ಶಿಸಿ ಗ್ರೂಪ್ ನೌಕರ ದುರ್ಮರಣ

ಕರಜಗಿ ಜೂ. 13:ಅಫಜಲಪುರ ತಾಲೂಕಿನ ಕರಜಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದಡಿ ಗ್ರೂಪ್ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಜಾವಿದ್ ಸೈಫನಸಾಬ ಅತ್ತಾರ (38) ಅವರು ವಿದ್ಯುತ್ ತಂತಿ ತಗುಲಿ ಶುಕ್ರವಾರ ದುರ್ಮರಣ ಹೊಂದಿದ್ದಾರೆ.
ಮನೆಗೆ ಸಂಬಂಧಿಸಿದ ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ನೆಲಕ್ಕುರುಳಿದ್ದಾರೆ. ಕೂಡಲೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಜಾವಿದ್ ಅತ್ತಾರ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದು, ಅವರ ನಿಧನದಿಂದ ಕುಟುಂಬಸ್ಥರು, ಬಂಧು-ಬಳಗ ಹಾಗೂ ಗ್ರಾಮಸ್ಥರಲ್ಲಿ ತೀವ್ರ ಶೋಕ ಆವರಿಸಿದೆ.
ಸರಳ ಸ್ವಭಾವ ಮತ್ತು ಕರ್ತವ್ಯನಿಷ್ಠೆಯಿಂದ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಾವಿದ್ ಅವರ ಅಕಾಲಿಕ ನಿಧನಕ್ಕೆ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಕರಜಗಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ