
ಕೊರಟಗೆರೆ, ಜೂ. ೧೩- ತಾಲ್ಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಟಿಗಾನಹಳ್ಳಿ ಗ್ರಾಮದ ಕೆರೆ ಹಾಳಾಗಿದ್ದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕೆರೆಯನ್ನು ಗ್ರಾಮಸ್ಥರಿಂದ ಹಸ್ತಾಂತರ ಪಡೆದು ೧೨ ಲಕ್ಷ ರೂ.ಗಳ ವೆಚ್ಚದಲ್ಲಿ ಕೆರೆ ಪುನಶ್ಚೇತನಗೊಳಿಸಿ ಅಭಿಮೃದ್ದಿ ಕಾರ್ಯ ಪೂರ್ಣಗೊಳಿಸಿ ಕೆರೆಯನ್ನು ಗ್ರಾಮಸ್ಥರಿಗೆ ಮರಳಿ ಹಸ್ತಾಂತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸುಮಾರು ೧೨ ಲಕ್ಷ ರೂ ವೆಚ್ಚದಲ್ಲಿ ಹಾಗೂ ಸ್ಥಳೀಯ ರೈತರ ಸಹಕಾರದೊಂದಿಗೆ ೧೦ ಎಕರೆಗೂ ಅಧಿಕ ವಿಸ್ತೀರ್ಣದ ಕೆರೆಯನ್ನು ಸ್ವಚ್ಚಗೊಳಿಸಿ ಅಭಿವೃಧ್ದಿ ಪಡಿಸಲಾಗಿದ್ದು, ಯೋಜನೆಯ ವತಿಯಿಂದ ರಾಜ್ಯದಲ್ಲಿ ಇದುವರೆಗೂ ೯೬೩ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಹೆಗ್ಗೆಳಿಕೆಗೆ ಪಾತ್ರವಾಗಿದೆ ಎನ್ನಲಾಗಿದೆ.
ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಕೌಶಲ್ಯಾಭಿವೃಧ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ ಕೆರೆಗೆ ಪೂಜೆ ಸಲ್ಲಿಸಿ, ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯಲ್ಲಿ ಕೋಟ್ಯಂತರ ಜನ ಫಲಾನುಭವಿಗಳಿದ್ದು ಅಂತಹ ಕ್ಷೇತ್ರಕ್ಕೆ ತೊಂದರೆ ಕೊಡುವ ಹುನ್ನಾರ ಮಾಡುವಾಗ ಆ ಜನರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರಹೆಗ್ಗಡೆ ಪರವಾಗಿ ಸತ್ಯದ ಪರವಾಗಿ ನಿಂತ್ತು ಧ್ವನಿ ಎತ್ತಬೇಕು ಎಂದರು.
ಈ ಕೆರೆ ಸ್ಥಳೀಯ ರೈತರು, ಸಾರ್ವಜನಿಕರು ಹಾಗೂ ಜಾನುವಾರು ಗಳಿಗೆ ನೀರಿನ ಮೂಲವಾಗಿ ಉಪಯೋಗ ವಾಗಲಿದ್ದು ಗ್ರಾಮೀಣ ಪ್ರದೇಶದ ಜಲ ಸಂರಕ್ಷಣೆಗೆ ಇಂತಹ ಯೋಜನೆಗಳು ಅತ್ಯಂತ ಅಗತ್ಯವಾಗಿದ್ದು ಈ ಕೆರೆ ಅಭಿವೃಧ್ದಿ ಕಾರ್ಯ ೯೬೩ ಕೆರೆಯಾಗಿ ಇದನ್ನು ಟ್ರಸ್ಟ್ ೧೦೦೦ ಕೆರೆ ಅಭಿವೃಧ್ದಿಗೆ ನಿಲ್ಲಿಸದೆ ನಿರಂತರವಾಗಿ ಮುಂದುವರಿಸಬೇಕು. ಟ್ರಸ್ಟ್ ನಡೆಸುತ್ತಿರುವ ವಿದ್ಯಾರ್ಥಿವೇತನ, ನಿರ್ಗತಿಕರಿಗೆ ಸೂರು ದೇವಾಲಯ ಅಭಿವೃಧ್ದಿ, ರೈತರಿಗೆ ಹಾಲು ಉತ್ಪಾದಕರಿಗೆ ಸಹಾಯಧನ, ವಿಕಲ ಚೇತನರಿಗೆ ಉಪಕರಣ, ಮದ್ಯವರ್ಧನ ಶಿಬಿರ, ರುದ್ರಭೂಮಿ ಅಭಿವೃಧ್ದಿ, ಶುದ್ದ ನೀರನ ಘಟಕದಂತಹ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸ ಬೇಕು ಎಂದು ತಿಳಿಸಿದರು.
ಯೋಜನಾಧಿಕಾರಿ ಅನಿತಾ ಮಾತನಾಡಿ, ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯು ೪೪ ವರ್ಷಗಳಿಂದ ರಾಜ್ಯದಲ್ಲಿ ಗ್ರಾಮೀಣ ಜನರ ಸೇವೆಯೊಂದಿಗೆ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ಶಕ್ತಿ ತುಂಬುತ್ತಿದೆ. ರಾಜ್ಯದಲ್ಲಿ ಅಭಿವೃದ್ದಿಪಡಿಸಿದ ೯೬೩ ನೇ ಕೆರೆ ಇದ್ದಾಗಿದ್ದು ಈ ಕೆರೆ ಅಭಿವೃಧ್ದಿಗೆ ಸಂಸ್ಥೆಯು ೧೨.೫೪ ಲಕ್ಷ ಆರ್ಥಿಕ ಸಹಾಯ ಧನ ಮೂಂಜೂರು ಮಾಡಿದ್ದು ೯.೩೦ ಲಕ್ಷ ಹಣ ಖರ್ಚಾಗಾದೆ ೩೦ ದಿನಗಳ ಶ್ರಮದ ಬಳಿಕ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಾಗಿದೆ. ಇದರೊಂದಿಗೆ ಸಂಸ್ಥೆ ಗ್ರಾಮಗಳಿಗೆ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗಂಗಣ್ಣ, ಹನುಮಣ್ಣ, ರಾಹುಲ್, ಸಂಸ್ಥೆಯ ಎಲ್.ರಾಜಣ್ಣ, ಮಮತಾ, ಜಗದೀಶ್, ಪವಿತ್ರ, ವೆಂಕಟಾಚಲಪತಿ, ರಾಜೇಶ್ವರಿ, ಮಹೇಂದ್ರ, ಮನು. ಶ್ರೀನಿವಾಸ್, ಕಿರಣ್, ಅನುಸೂಯಮ್ಮ, ಸುಶೀಲಮ್ಮ, ಮತ್ತಿತರರು ಉಪಸ್ಥಿತರಿದ್ದರು.





























