
ನವಲಗುಂದ,ಜು೨: ತಾಲ್ಲೂಕಿನ ಶಿರೂರು ಗ್ರಾಮದಲ್ಲಿನ ರೈತರು ಕಪ್ಪೆ ಹಾಗೂ ಕತ್ತೆಗಳಿಗೆ ಮದುವೆ ಮಾಡಿಸಿ, ವರುಣರಾಯ ಕೃಪೆ ತೋರಿ ಮಳೆ ಸುರಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ಮಳೆ ಇಲ್ಲದೆ ತತ್ತರಿಸಿರುವ ರೈತರು ವರುಣರಾಯನ ಪ್ರಾರ್ಥನೆಗೆ ಈ ಪ್ರಯೋಗ ನಡೆಸಿದ್ದಾರೆ. ಮಳೆಇಲ್ಲದೆ ಬೆಳೆಗಳು ಒಣಗುತ್ತಿವೆ. ಯುಗಾದಿಗೆ ಹಿಂದೇಳು, ಮುಂದೇಳು ದಿನ ಮಳೆ ಬರುತ್ತದೆ ಎಂಬುದು ನಂಬಿಕೆ. ಈ ಬಾರಿ ಯುಗಾದಿ ತಡವಾಗಿ ಬಂದಿದ್ದರೂ ಮಳೆ ಬರದ ಕಾರಣ ಗ್ರಾಮಸ್ಥರು ಕಪ್ಪೆ, ಕತ್ತೆಗಳ ಮದುವೆಯೊಂದಿಗೆ ದೇವರ ಮೊರೆ ಹೋಗಿದ್ದಾರೆ.
ಎರಡು ಕಪ್ಪೆಗಳಿಗೆ ಹಾಗೂ ಎರಡು ಕತ್ತೆಗಳಿಗೆ ಹೂವು ಮುಡಿಸಿ, ಜೊತೆಯಾಗಿ ಇರಿಸಿ ಅರಸಿನದ ಕೊಂಬು ಕಟ್ಟಿಸುವ ಮೂಲಕ ಮದುವೆ ಮಾಡಿಸಿದರು. ವರುಣ ದೇವನಿಗೆ ಪೂಜೆ ಸಲ್ಲಿಸಿ ಮಳೆಸುರಿಸಿ ಬೆಳೆ, ಜನ-ಜಾನುವಾರು, ಪ್ರಾಣಿ, ಪಕ್ಷಿ ಸಂಕುಲಗಳನ್ನು ಉಳಿಸುವಂತೆ ಗ್ರಾಮದ ಜನರು ಪ್ರಾರ್ಥಿಸಿದರು. ನಂತರ ಅನ್ನಸಂತರ್ಪಣೆ ನಡೆಸಿದರು.
ಬರದ ಸಮಯದಲ್ಲಿ ಹಿರಿಯರು ಮಾಡುತ್ತಿದ್ದಂತೆ ಸಂಪ್ರದಾಯಬದ್ಧವಾಗಿ ಕಪ್ಪೆ, ಕತ್ತೆಗಳಿಗೆ ಮದುವೆ ಮಾಡಿಸಿ, ಮಳೆರಾಯನನ್ನು ಪ್ರಾರ್ಥಸಿದ್ದೇವೆ’ ಎಂದು ಗ್ರಾಮಸ್ಥರು ತಿಳಿಸಿದರು. ಶಿರೂರು ಗ್ರಾಮಸ್ಥರಲ್ಲದೆ ಸುತ್ತಮುತ್ತಲಿನ ಗ್ರಾಮದ ಜನರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






























