Home ಜಿಲ್ಲೆ ಬುದ್ಧ-ಬಸವ-ಅಂಬೇಡ್ಕರ್ ಜಯಂತಿ ಅಂಗವಾಗಿ ಉಚಿತ ಅಭಿನಯ ರಂಗ ತರಬೇತಿ ಶಿಬಿರಕ್ಕೆ ಚಾಲನೆ

ಬುದ್ಧ-ಬಸವ-ಅಂಬೇಡ್ಕರ್ ಜಯಂತಿ ಅಂಗವಾಗಿ ಉಚಿತ ಅಭಿನಯ ರಂಗ ತರಬೇತಿ ಶಿಬಿರಕ್ಕೆ ಚಾಲನೆ

ಬೀದರ್, ಮೇ ೬:ಬೀದರ್ ನಗರದಲ್ಲಿ ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಸಾಂಸ್ಕೃತಿಕ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಜನಜನಿತ ಕಲಾ ಪ್ರದರ್ಶನ ಸಂಘ ಬೀದರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಉಚಿತ ಅಭಿನಯ ರಂಗ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಮತ್ತು ಯುವಕರು ಭಾಗವಹಿಸಿದ್ದು, ರಂಗಭೂಮಿಯ ಮೂಲಭೂತ ಅಂಶಗಳು, ಅಭಿನಯದ ತಂತ್ರಗಳು, ವೇದಿಕೆ ಮೇಲಿನ ವರ್ತನೆ, ಸಂಭಾಷಣಾ ಶೈಲಿ ಹಾಗೂ ಕಲಾತ್ಮಕ ಅಭಿವ್ಯಕ್ತಿ ಕುರಿತು ಸಮಗ್ರ ತರಬೇತಿಯನ್ನು ನೀಡಲಾಗುತ್ತಿದೆ.

ಶಿಬಿರದ ನಿರ್ದೇಶಕರಾದ ಚಲನಚಿತ್ರ ನಟ ಯಶವಂತ ಕುಚಬಾಳ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಂಗಭೂಮಿ ವ್ಯಕ್ತಿತ್ವ ವಿಕಾಸಕ್ಕೆ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಇಂತಹ ಶಿಬಿರಗಳು ಉತ್ತಮ ವೇದಿಕೆ ಒದಗಿಸುತ್ತವೆ ಎಂದು ಹೇಳಿದರು. ಅಲ್ಲದೆ, ಕಲೆಯ ಮೂಲಕ ಸಮಾಜದಲ್ಲಿ ಉತ್ತಮ ಸಂದೇಶಗಳನ್ನು ಹರಡುವ ಜವಾಬ್ದಾರಿಯೂ ಕಲಾವಿದರ ಮೇಲಿದೆ ಎಂದು ಅವರು ತಿಳಿಸಿದರು.

ನೃತ್ಯ ನಿರ್ದೇಶಕರು ಹಾಗೂ ವಿಶಾಲ್ ಡ್ಯಾನ್ಸ್ ಅಕಾಡೆಮಿಯ ಮುಖ್ಯಸ್ಥರಾದ ವಿಶಾಲ್ ಟೇಕರಾಜ್ ಅವರು ಮಾತನಾಡಿ, ನೃತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕುತ್ತಿದ್ದರೂ ಅಭಿನಯ ಕಲೆಯ ಬಗ್ಗೆ ಅರಿವು ಇನ್ನಷ್ಟು ಹೆಚ್ಚಾಗಬೇಕಿದೆ. ಈ ರೀತಿಯ ರಂಗ ತರಬೇತಿ ಶಿಬಿರಗಳು ಜಿಲ್ಲೆಯ ಕಲಾತ್ಮಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಹೊಸ ಪ್ರತಿಭೆಗಳನ್ನು ಹೊರತರುವಲ್ಲಿ ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಕರ್ನಾಟಕ ಜನಪರ ಸಂಘದ ತಾಲೂಕು ಅಧ್ಯಕ್ಷರಾದ ಎಸ್.ಬಿ. ಕುಚಬಾಳ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಲಾ-ಸಂಸ್ಕೃತಿಯ ಬೆಳೆವಿಕೆಗೆ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವೆಂದು ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ನೃತ್ಯ ನಿರ್ದೇಶಕರಾದ ಪವನ್ ನಾಟಿಕಾರ್ ವಂದನೆ ಸಲ್ಲಿಸಿದರು.