Home ಮುಖಪುಟ ಸುದ್ದಿ ಶಿವಾಜಿನಗರದಲ್ಲಿ ಮತ್ತೆ ಫುಟ್‌ಪಾತ್ ತೆರವು ಆರಂಭ

ಶಿವಾಜಿನಗರದಲ್ಲಿ ಮತ್ತೆ ಫುಟ್‌ಪಾತ್ ತೆರವು ಆರಂಭ

ಬೆಂಗಳೂರು, ಜು.೨೭- ಶಿವಾಜಿನಗರದ ರಸೆಲ್ ಮಾರ್ಕೆಟ್ ವ್ಯಾಪ್ತಿಯಲ್ಲಿ ಫುಟ್‌ಪಾತ್ ಮೇಲಿನ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಸೋಮವಾರ ಮತ್ತೆ ಆರಂಭಗೊಂಡಿದ್ದು, ಬಿಗಿ ಪೊಲೀಸ್ ಭದ್ರತೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.


ಕೇಂದ್ರ ನಗರ ಪಾಲಿಕೆಯ ಇಂಜಿನಿಯರ್ ಮಾಧವರಾವ್, ಎಇಇ ರುಚಿತಾ ಹಾಗೂ ಎಇ ಸಾವಿತ್ರಿ ಅವರ ನೇತೃತ್ವದಲ್ಲಿ ಸಿಬ್ಬಂದಿ ಧರ್ಮರಾಜ ದೇವಸ್ಥಾನ ಬೀದಿ, ರಸೆಲ್ ಮಾರ್ಕೆಟ್ ರಸ್ತೆ ಹಾಗೂ ಚರ್ಚ್ ರಸ್ತೆಯಲ್ಲಿನ ಅಕ್ರಮ ಫುಟ್‌ಪಾತ್ ಒತ್ತುವರಿಗಳನ್ನು ತೆರವುಗೊಳಿಸಿದರು. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಮಾರು ೧೦೦ ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.


ಕಾರ್ಯಾಚರಣೆಯ ವೇಳೆ ಪೊಲೀಸರು ಸಂಪೂರ್ಣ ಪ್ರಕ್ರಿಯೆಯ ವೀಡಿಯೋ ಚಿತ್ರೀಕರಣ ನಡೆಸಿದ್ದು, ಘಟನೆಗಳ ದಾಖಲಾತಿಗಾಗಿ ಪ್ರತಿಯೊಂದು ಹಂತವನ್ನೂ ದಾಖಲಿಸಿಕೊಂಡರು.


ಹಿಂದಿನ ಕಾರ್ಯಾಚರಣೆಯಲ್ಲಿ ಹಲ್ಲೆಗೆ ಒಳಗಾಗಿದ್ದ ಎಇ ಸಾವಿತ್ರಿ ಮಾತನಾಡಿ, “ತೆರವು ಕಾರ್ಯಾಚರಣೆ ಮತ್ತೆ ಆರಂಭವಾಗಿದೆ. ಆ ದಿನ ಮೊದಲು ಕಿಡಿಗೇಡಿಗಳು ನನ್ನ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದರು. ಹೊರಗಿನಿಂದ ಬಂದವರೇ ಆ ಕೃತ್ಯ ಎಸಗಿದ್ದರು. ಆದರೆ ಇಲ್ಲಿನ ಸ್ಥಳೀಯರು ನಮಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಅವರೇ ಸ್ವಯಂಪ್ರೇರಿತವಾಗಿ ಒತ್ತುವರಿ ತೆರವು ಮಾಡಿದ್ದಾರೆ. ಈಗ ಸುಮಾರು ೧೦೦ ಮಂದಿ ಪೊಲೀಸರ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ,” ಎಂದರು.


ಇದೇ ವೇಳೆ ಇಂಜಿನಿಯರ್ ಮಾಧವರಾವ್ ಮಾತನಾಡಿ, “ಪೊಲೀಸರ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳೀಯರು, ವಿಶೇಷವಾಗಿ ಮುಸ್ಲಿಂ ಬಾಂಧವರು ಉತ್ತಮ ಸಹಕಾರ ನೀಡುತ್ತಿದ್ದಾರೆ. ರಸೆಲ್ ಮಾರ್ಕೆಟ್ ಭಾಗದಲ್ಲಿ ಹೆಚ್ಚಿನ ಫುಟ್‌ಪಾತ್ ಒತ್ತುವರಿ ಆಗಿರುವುದರಿಂದ ಎಲ್ಲ ಅಕ್ರಮ ಒತ್ತುವರಿಗಳನ್ನೂ ತೆರವುಗೊಳಿಸಲಾಗುತ್ತದೆ,” ಎಂದು ತಿಳಿಸಿದರು.


ಹಿಂದಿನ ಹಲ್ಲೆ ಘಟನೆಯ ನಂತರ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿರುವ ಪೊಲೀಸರು, ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ನಿರಂತರ ನಿಗಾ ವಹಿಸಿದ್ದಾರೆ.