
ಬೆಂಗಳೂರು, ಜೂ.೨೯-ಸೆಕ್ಯೂರಿಟಿ ಏಜೆನ್ಸಿ ಉದ್ಯೋಗಿಯೊಬ್ಬರನ್ನು ಅಪಹರಿಸಿ ಆಟಿಕೆ ಪಿಸ್ತೂಲ್ ತೋರಿಸಿ ಡಕಾಯಿತಿ ಮಾಡಿದ್ದ ಐವರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಮಾದನಾಯಕನಹಳ್ಳಿ ಪೊಲೀಸರು ೮೫.೫೦ ಲಕ್ಷ ನಗದು ೨ ಕಾರು ೩ ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ.
ಪೀಣ್ಯದ ಚೇತನ್(೨೮) ಚಿಕ್ಕಲಸಂದ್ರದ ಸೋಮಶೇಖರ್ ಅಲಿಯಾಸ್ ಡೆಡ್ಲಿಸೋಮ(೨೯)ಆರ್ ಪಿಸಿ ಲೇಔಟ್ನ ಸೂರ್ಯ ಅಲಿಯಾಸ್ ಸೂರಿ(೨೫) ಚಿಕ್ಕಬಾಣವಾರದ ಬಸವನಗೌಡ ಅಲಿಯಾಸ್ ಬಸವರಾಜ್ (೨೮) ಹಾಗೂ ದಾಸನಪುರದ ವಿನಯ್ ಅಲಿಯಾಸ್ ವಿನಿ(೨೬)ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾದನಾಯಕನಹಳ್ಳಿ ತಮ್ಮೇನಹಳ್ಳಿಯ ಸೆಕ್ಯೂರಿಟಿ ಎಜೆನ್ಸಿ ಉದ್ಯೋಗಿ ಶಿವಶಂಕರ್
ಅವರು ಕಳೆದ ಜೂ.೧೫ ರಂದು ಅವರ ಚಾಲಕ ರಾತ್ರಿ ಸಮಯದಲ್ಲಿ ಕುದುರೆಗೆರೆ ಕಾಲೋನಿ ಗಣೇಶ ದೇವಸ್ಥಾನದ ಬಳಿ ಅವರ ಕಾರಿನ ಡಿಕ್ಕಿಯಲ್ಲಿ೭೪ ಲಕ್ಷ ಹಣವನ್ನಿಟ್ಟುಕೊಂಡು ಬರುವಾಗ ಬೈಕ್ ಹಾಗೂ ಕಾರಿನಲ್ಲಿ ಬಂದ ಬಂಧಿತ ಆರೋಪಿಗಳು ಸೇರಿ ೭ ಮಂದಿ ಅಡ್ಡಗಟ್ಟಿ, ಚಾಕು, ಬಿಯರ್ ಬಾಟಲ್ಗಳಿಂದ ಹೆದರಿಸಿ, ಕಾರಿಗೆ ಬಲವಂತವಾಗಿ ಶಿವಶಂಕರ್ ಹಾಗೂ ಅವರ ಚಾಲಕನನ್ನು ಅಪಹರಿಸಿ ನೆಲಮಂಗಲದ ಕಡೆಯ ಒಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾರಿನಲ್ಲಿದ್ದ ೭೪ ಲಕ್ಷ ನಗದನ್ನು ತೆಗೆದುಕೊಂಡು ಹಾಗೂ ಮನೆಯಲ್ಲಿದ್ದ ೩೫ ಲಕ್ಷ ಹಣವನ್ನು ತರಿಸುವಂತೆ ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಹೆದರಿಸಿ, ಮನೆಯಿಂದ ನಗದನ್ನು ತರಿಸಿಕೊಂಡಿದ್ದರು.
ಶಿವಶಂಕರ್ ಅವರಿಂದ ೧.೦೯ ಕೋಟಿ ಹಣವನ್ನು ತೆಗೆದುಕೊಂಡು ಮರುದಿನ ಮುಂಜಾನೆ ಇಬ್ಬರನ್ನು ನೆಲಮಂಗಲದ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದರು.
ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಖಚಿತ ಮಾಹಿತಿಯನ್ನು ಕಲೆಹಾಕಿ ಕಳೆದ ಜೂ. ೨೦ ರಂದು ಓರ್ವ ನನ್ನು ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಬಳಿ ೪ ಲಕ್ಷ ನಗದು,೧ ಕಾರು ಮತ್ತು ೧ ಮೊಬೈಲ್ ಸಮೇತ ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ೯ ಸಹಚರರ ಜೊತೆ ಸೇರಿ ಸಂಚು ರೂಪಿಸಿ ಕೃತ್ಯ ನಡೆಸಿರುವುದನ್ನು ತನ್ನೊಪ್ಪಿಕೊಂಡು ಸಹಚರರುಗಳ ಮಾಹಿತಿಯನ್ನು ನೀಡಿದ್ದಾನೆ. ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿದರೋಡೆ ಮಾಡಿದ ಹಣದಲ್ಲಿ ೫೬ ಲಕ್ಷ ನಗದನ್ನು ಚನ್ನಸಂದ್ರದಲ್ಲಿ ವಾಸವಿರುವ ಆತನ ಸಂಬಂಧಿಯ ಮನೆಯಲ್ಲಿಟ್ಟಿರುವುದನ್ನು ಹೇಳಿದ್ದು,ಅದನ್ನು ವಶಪಡಿಸಿಕೊಳ್ಳಲಾಗಿದೆ.
ಅಲ್ಲದೇ ಜೂ.೨೧ ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರನ್ನು ಸೋಲದೇವನಹಳ್ಳಿಯ ಕಾಲೇಜ್ ವೊಂದರ ಬಳಿ, ಇನ್ನೋರ್ವ ವ್ಯಕ್ತಿಯನ್ನು ನೆಲಮಂಗಲದ ಬಿನ್ನಮಂಗಲದ ಬಳಿ ಹಾಗೂ ಮತ್ತೋರ್ವಬನ್ನು ಗೊರಗುಂಟೆಪಾಳ್ಯದ ಬಳಿ ಬಂಧಿಸಿ ವಿಚಾರಣೆ ನಡೆಸಿದಾಗ ತಪ್ರೊಪ್ಪಿಕೊಂಡಿರುತ್ತಾರೆ.
ಆರೋಪಿಗಳ ವಶದಲ್ಲಿದ್ದ ೨ ಮೊಬೈಲ್ ಮತ್ತು ದರೋಡೆಗೆ ಸಂಬಂಧಿಸಿದ ೧ ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ನಾಲ್ವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ದರೋಡೆ ಮಾಡಿದ ಹಣವನ್ನು ಆರೋಪಿಗಳು ವಾಸವಿದ್ದ ಹೊಸಹಳ್ಳಿ, ತೋಟದಗುಡ್ಡದಹಳ್ಳಿ, ಚಿಕ್ಕಬಾಣವಾರದ ವಾಸದ ಮನೆಗಳಲ್ಲಿ ನಗದನ್ನು ಇಟ್ಟಿರುವುದಾಗಿ ತಿಳಿಸಿದ್ದು ಅಲ್ಲಿಂದ ೨೪.೫೦ ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ೧ ಕಾರು ಹಾಗೂ ಕೃತ್ಯಕ್ಕೆ ತಂದಿದ್ದ ಒಂದು ಆಟಿಕೆ ಪಿಸ್ತೂಲ್ನ್ನು ವಶಪಡಿಸಿಕೊಳ್ಳಲಾಗಿದೆ
ವಿಚಾರಣೆಯ ವೇಳೆ ಪ್ರಕರಣದಲ್ಲಿ ಭಾಗಿಯಾಗಿದ್ದ ೧೦ ಆರೋಪಿಗಳು ಸ್ನೇಹಿತರಾಗಿದ್ದು, ಸರಿಯಾದ ಕೆಲಸಗಳಿಲ್ಲದ ಕಾರಣ ಮತ್ತು ಇದರಲ್ಲಿನ ಮೂವರು ಆರೋಪಿಗಳು ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ರೌಡಿ ಆರೋಪಿಗಳಾಗಿದ್ದು ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಅವರ ಮುಂದಾಳತ್ತದಲ್ಲಿ ಸಂಚು ರೂಪಿಸಿರುತ್ತಾರೆ ಹಾಗೂ ಪಿರಾದಿಯವರ ಬಳಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಓರ್ವ ಆರೋಪಿ ಶಿವಶಂಕರ್ ತನ್ನ ಸ್ನೇಹಿತರ ಬಳಿ ಕಂಪನಿಯೊಂದಕ್ಕೆ ಹೂಡಿಕೆ ಮಾಡಲು ಹಣವನ್ನು ತರುತ್ತಿರುವ ಬಗ್ಗೆ ಸುಳಿವನ್ನು ನೀಡಿದ್ದರಿಂದ ಕೃತ್ಯವೆಸಗಿರುವುದನ್ನು ಬಾಯ್ಬಿಟ್ಟಿದ್ದಾರೆ.
ಕಾರ್ಯಾಚರಣೆಯನ್ನು ವಾಯುವ್ಯ ವಿಭಾಗದ ಡಿಸಿಪಿ ಡಿ.ಎಲ್.ನಾಗೇಶ್, ಮಾರ್ಗದರ್ಶನದಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಪ್ರಶಾಂತ್ ಮತ್ತವರ ಸಿಬ್ಬಂದಿ ಕೈಗೊಂಡಿದೆ ಎಂದು ಹೇಳಿದರು.



























